ದೇವಾಡಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ಒತ್ತಾಯ: ಡಿ.20ರಂದು ಉಡುಪಿಯಲ್ಲಿ ವಿಶ್ವ ದೇವಾಡಿಗ ಮಹಾಧಿವೇಶನ
ದೇವಾಡಿಗ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿ, ಸಮುದಾಯದ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಅಭಿವೃದ್ಧಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವಂತೆ ಸರ್ಕಾರವನ್ನು ಒತ್ತಾಯಿಸುವ ಉದ್ದೇಶದಿಂದ ಡಿಸೆಂಬರ್ 20ರಂದು ಉಡುಪಿಯ ಚಿಟ್ಟಾಡಿಯ ಬಯಲು ರಂಗಮಂದಿರದಲ್ಲಿ ವಿಶ್ವ ದೇವಾಡಿಗ ಮಹಾಧಿವೇಶನ ನಡೆಯಲಿದೆ ಎಂದು ಬಾರ್ಕೂರು ವಿಶ್ವ ದೇವಾಡಿಗ ಮಹಾಮಂಡಳ ಅಧ್ಯಕ್ಷ ಧರ್ಮಪಾಲ ಯು. ದೇವಾಡಿಗ ತಿಳಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಹಾಧಿವೇಶನದ ಸಿದ್ಧತೆಗಳ ಅಂಗವಾಗಿ ಕಾರ್ಯಾಲಯವನ್ನು ಜುಲೈ 5ರಂದು ಉದ್ಘಾಟಿಸಲಾಗುತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ಹೊರರಾಜ್ಯಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಮಹಾಧಿವೇಶನದಲ್ಲಿ ದೇವಾಡಿಗ ಸಮಾಜದ ವಿವಿಧ ಬೇಡಿಕೆಗಳ ಕುರಿತು ಚರ್ಚೆ ನಡೆಸಲಾಗುವುದು. ಮುಖ್ಯವಾಗಿ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ, ರಾಜ್ಯ ಬಜೆಟ್‌ನಲ್ಲಿ ವಿಶೇಷ ಅನುದಾನ ಮೀಸಲು ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ವಿಶೇಷ ಯೋಜನೆಗಳನ್ನು ಜಾರಿಗೊಳಿಸುವಂತೆ ಆಗ್ರಹಿಸಲಾಗುವುದು ಎಂದು ಅವರು ತಿಳಿಸಿದರು.
ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಹಾಗೂ ಕೇರಳದ ಕಾಸರಗೋಡು ಸೇರಿದಂತೆ ಹಲವು ಭಾಗಗಳಲ್ಲಿ ಶತಮಾನಗಳಿಂದ ದೇವಾಡಿಗ ಸಮುದಾಯ ನೆಲೆಸಿದ್ದು, ಸಮಾಜದ ಬಹುತೇಕ ಜನರು ಕೃಷಿ ಕಾರ್ಮಿಕರು, ದೇವಾಲಯಗಳಲ್ಲಿ ವಾದ್ಯಸೇವೆ, ಸಂಗೀತ ಸೇವೆ, ಶುಚಿತ್ವ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ವಿವರಿಸಿದರು.
ಸಮುದಾಯದಲ್ಲಿ ಸೇರಿಗಾರ, ಮೊಯಿಲಿ, ದೇವಾಡಿಗ ಮತ್ತು ಶೇರಿಗಾರ ಪ್ರಮುಖ ಉಪನಾಮಗಳಾಗಿದ್ದು, ಸರ್ಕಾರದ ಅಂಕಿ-ಅಂಶಗಳ ಪ್ರಕಾರ ದೇವಾಡಿಗ ಸಮಾಜದ ಜನಸಂಖ್ಯೆ ಐದು ಲಕ್ಷಕ್ಕೂ ಅಧಿಕವಾಗಿದೆ. ಆದರೆ ವಾಸ್ತವಿಕವಾಗಿ ಈ ಸಂಖ್ಯೆ ಎಂಟು ಲಕ್ಷಕ್ಕೂ ಮೀರಿರಬಹುದೆಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಸಮುದಾಯದ ಸಹಕಾರದೊಂದಿಗೆ 2017–18ರಲ್ಲಿ ಬಾರ್ಕೂರಿನಲ್ಲಿ ಶ್ರೀ ಏಕನಾಥೇಶ್ವರಿ ದೇವಸ್ಥಾನ ನಿರ್ಮಾಣಗೊಂಡಿದ್ದು, 2023ರಲ್ಲಿ ವಿಶ್ವ ದೇವಾಡಿಗ ಮಹಾಮಂಡಳ ಸ್ಥಾಪನೆಯಾಯಿತು. ಹಿಂದಿನ ಹಾಗೂ ಹಾಲಿ ರಾಜ್ಯ ಸರ್ಕಾರಗಳಿಗೆ ಹಲವು ಬಾರಿ ಅಭಿವೃದ್ಧಿ ನಿಗಮ ಸ್ಥಾಪನೆ ಸಂಬಂಧ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಷಾದನೀಯ ಎಂದು ಅವರು ಹೇಳಿದರು.
ಈ ಬಾರಿಯ ಮಹಾಧಿವೇಶನದ ಮೂಲಕ ದೇವಾಡಿಗ ಸಮಾಜದ ನ್ಯಾಯಸಮ್ಮತ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ಮತ್ತೊಮ್ಮೆ ಬಲವಾಗಿ ತಲುಪಿಸಲಾಗುವುದು ಎಂದು ಧರ್ಮಪಾಲ ಯು. ದೇವಾಡಿಗ ವಿಶ್ವಾಸ ವ್ಯಕ್ತಪಡಿಸಿದರು.
ಸುದ್ದಿಗೋಷ್ಟಿಯಲ್ಲಿ ವಿಶ್ವ ದೇವಾಡಿಗ ಮಹಾಮಂಡಳ ಪ್ರಧಾನ ಕಾರ್ಯದರ್ಶಿ ಹಿರಿಯಡ್ಕ ಮೋಹನದಾಸ, ಪ್ರಧಾನ ಕಾರ್ಯದರ್ಶಿ ಗಣೇಶ ದೇವಾಡಿಗ, ಸಂಘಟನಾ ಕಾರ್ಯದರ್ಶಿ ಜನಾರ್ಧನ ಪಡುಪಣಂಬೂರು, ಜೊತೆ ಕಾರ್ಯದರ್ಶಿ ಯಾದವ ದೇವಾಡಿಗ, ಕೋಶಾಧಿಕಾರಿ ಸುರೇಶ್ ದೇವಾಡಿಗ, ಮುಂಬೈ ದೇವಾಡಿಗ ಮಹಾ ಮಂಡಳ ಅಧ್ಯಕ್ಷ ರವಿ ಎಸ್. ದೇವಾಡಿಗ, ವಿಶ್ವ ದೇವಾಡಿಗ ಮಹಾಮಂಡಳ ಸಮಿತಿ ಸದಸ್ಯ ಚೆನ್ನಪ್ಪ ಮೊಯಿಲಿ ಉಪಸ್ಥಿತರಿದ್ದರು.