ಜು.29: ಉಡುಪಿಯಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನೂತನ ಶಾಖೆ ಶುಭಾರಂಭ
ಉಡುಪಿಯ ಕಿನ್ನಿಮುಲ್ಕಿಯ ಶಾಂತಾ ಬಿಲ್ಡಿಂಗ್‌ನಲ್ಲಿ ಕಿದಿಯೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ನೂತನ ಶಾಖೆ ಜುಲೈ 29ರಂದು ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಕಿದಿಯೂರು ಉದಯಕುಮಾರ್ ಶೆಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಜೆ 3.30ಕ್ಕೆ ಭದ್ರತಾ ಕೊಠಡಿ ಹಾಗೂ ಕ್ಯಾಶ್ ಕೌಂಟರ್ ಉದ್ಘಾಟನೆ ನಡೆಯಲಿದ್ದು, ಸಂಜೆ 4.30ಕ್ಕೆ ವೀರಭದ್ರ ಸಭಾಭವನದಲ್ಲಿ ಉದ್ಘಾಟನಾ ಸಮಾರಂಭ ಆಯೋಜಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಡುಪಿ ಶ್ಯಾಮಿಲಿ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ. ಜಿ. ಶಂಕರ್, ಬೆಂಗಳೂರು ಎಂ.ಆರ್.ಜಿ. ಗ್ರೂಪ್‌ನ ಡಾ. ಕೆ. ಪ್ರಕಾಶ್ ಶೆಟ್ಟಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಕಾರ್ಕಳ ಶಾಸಕ ಸುನಿಲ್ ಕುಮಾರ್, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಸಂಸದ ಬ್ರಿಜೇಶ್ ಚೌಟ, ಮಾಜಿ ಸಂಸದ ಹಾಗೂ ಬಿಜೆಪಿ ನಿಕಟ ಪೂರ್ವ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಹಿರಿಯ ಸಹಕಾರಿ ಧುರೀಣ ಟಿ. ಶಂಭು ಶೆಟ್ಟಿ, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಆಸ್ಪೆನ್ ಇನ್‌ಫ್ರಾಸ್ಟ್ರಕ್ಚರ್ಸ್ ಮುಖ್ಯಸ್ಥ ಅಶೋಕ್ ಕುಮಾರ್ ಶೆಟ್ಟಿ, ಆದರ್ಶ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಜಿ.ಎಸ್. ಚಂದ್ರಶೇಖರ್, ಸದ್ಗುರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಆಚಾರ್ಯ, ಶಾಂತಾ ಇಲೆಕ್ಟ್ರಿಕಲ್ಸ್ ಪ್ರೈ.ಲಿ. ಆಡಳಿತ ನಿರ್ದೇಶಕ ಶ್ರೀಪತಿ ಭಟ್ ಉಚ್ಚಿಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿರಲಿದ್ದಾರೆ.
ಉದ್ಘಾಟನಾ ಪ್ರಯುಕ್ತ ವಿಶೇಷ ಠೇವಣಿ ಯೋಜನೆಯನ್ನು ಸಂಸ್ಥೆ ಘೋಷಿಸಿದೆ. ಒಂದು ವರ್ಷಕ್ಕಿಂತ ಹೆಚ್ಚು ಹಾಗೂ ಎರಡು ವರ್ಷದೊಳಗಿನ ಫಿಕ್ಸ್ಡ್ ಡೆಪಾಸಿಟ್‌ಗಳಿಗೆ ಶೇ.11.00 ಬಡ್ಡಿದರವನ್ನು ಸೀಮಿತ ಅವಧಿಗೆ ನೀಡಲಾಗುವುದು. ಉಳಿದಂತೆ 90ರಿಂದ 180 ದಿನಗಳವರೆಗೆ ಶೇ.5.00, 181 ದಿನಗಳಿಂದ ಒಂದು ವರ್ಷದೊಳಗೆ ಶೇ.7.50, ಒಂದು ವರ್ಷದಿಂದ ಎರಡು ವರ್ಷದೊಳಗೆ ಶೇ.9.00 ಹಾಗೂ ಎರಡು ವರ್ಷದಿಂದ ಐದು ವರ್ಷದೊಳಗೆ ಶೇ.9.50 ಬಡ್ಡಿದರ ಲಭ್ಯವಿರಲಿದೆ ಎಂದು "ಸ್ಟಾರ್ ಸಮಯ"ಕ್ಕೆ ಉದಯಕುಮಾರ್ ಶೆಟ್ಟಿ ತಿಳಿಸಿದರು.
ರಾಷ್ಟ್ರೀಕೃತ ಬ್ಯಾಂಕ್‌ಗಳ ಮಾದರಿಯಲ್ಲೇ ವಿವಿಧ ಸಾಲ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಸಂಸ್ಥೆ ಕೇವಲ ವ್ಯವಹಾರಿಕ ಲಾಭದ ಉದ್ದೇಶವನ್ನಷ್ಟೇ ಹೊಂದಿಲ್ಲ. ಲಾಭದ ಒಂದು ಭಾಗವನ್ನು ವಿದ್ಯಾರ್ಥಿಗಳು ಹಾಗೂ ಅಶಕ್ತರ ಕಲ್ಯಾಣಕ್ಕಾಗಿ ಮೀಸಲಿಡುವ ಸಮಾಜಮುಖಿ ಗುರಿಯೊಂದಿಗೆ ಸಂಸ್ಥೆ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷೆ ಪ್ರಣೀತ ಶರದ್ ಶೆಟ್ಟಿ , ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷಿತಾ ನಿರ್ದೇಶಕರಾದ ಸುಧಾಕರ್ ಹೆಗ್ಡೆ, ಹಾಗೂ ಉಮೇಶ್ ನಾಯರಿ ಉಪಸ್ಥಿತರಿದ್ದರು.