ಉಡುಪಿ ಆರ್‌ಟಿಒ ಕಚೇರಿಯಲ್ಲಿ ಸೇವೆ ವಿಳಂಬ: ಶಾಸಕ ಯಶ್ಪಾಲ್ ಸುವರ್ಣ ಭೇಟಿ
ಸಿಬ್ಬಂದಿ ಕೊರತೆಯಿಂದ ಸಾರ್ವಜನಿಕ ಸೇವೆಗಳು ವಿಳಂಬವಾಗುತ್ತಿರುವ ಕುರಿತು ಬಂದ ದೂರುಗಳ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅವರು ಸೋಮವಾರ ಉಡುಪಿ ಪ್ರಾದೇಶಿಕ ಸಾರಿಗೆ (ಆರ್‌ಟಿಒ) ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು.
ಪರಿಶೀಲನೆ ವೇಳೆ ಆರ್‌ಟಿಒ ಕಚೇರಿಯ ಪ್ರಮುಖ ಹುದ್ದೆಗಳಾದ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಸಹಾಯಕ ಸಾರಿಗೆ ಅಧಿಕಾರಿ ಹುದ್ದೆಗಳು ಖಾಲಿ ಇರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಪ್ರಸ್ತುತ ಹಿರಿಯ ಮೋಟಾರು ವಾಹನ ನಿರೀಕ್ಷಕರು ಪ್ರಭಾರ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಒಟ್ಟು ಐದು ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ಪೈಕಿ ನಾಲ್ಕು ಹುದ್ದೆಗಳು ಖಾಲಿ ಇರುವುದರಿಂದ ಕಾರ್ಯನಿರ್ವಹಣೆಗೆ ತೀವ್ರ ತೊಂದರೆ ಉಂಟಾಗಿದೆ ಎಂದು ತಿಳಿಸಿದರು.
ಸಿಬ್ಬಂದಿ ಕೊರತೆಯಿಂದ ಚಾಲನಾ ಪರವಾನಗಿ, ವಾಣಿಜ್ಯ ವಾಹನಗಳು, ರಿಕ್ಷಾ, ಬಸ್, ಟ್ಯಾಕ್ಸಿ ಹಾಗೂ ಮ್ಯಾಕ್ಸಿಕ್ಯಾಬ್‌ಗಳ ಫಿಟ್ನೆಸ್ ಪ್ರಮಾಣಪತ್ರ ಸೇರಿದಂತೆ ವಿವಿಧ ಸೇವೆಗಳಿಗಾಗಿ ಸಾರ್ವಜನಿಕರು ಹಾಗೂ ವಾಹನ ಮಾಲೀಕರು ದಿನಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ಪ್ರಸ್ತುತ ಕೇವಲ ಇಬ್ಬರು ಮೋಟಾರು ವಾಹನ ನಿರೀಕ್ಷಕರು ವಾರದಲ್ಲಿ ಮೂರು ದಿನ ವಿವಿಧ ತಾಲೂಕು ಕ್ಯಾಂಪ್‌ಗಳಲ್ಲಿ ಸೇವೆ ಸಲ್ಲಿಸುವುದರ ಜೊತೆಗೆ ಜಿಲ್ಲಾ ಕಚೇರಿಯ ವಾಹನಗಳ ತಪಾಸಣೆ ಮತ್ತು ಜಿಲ್ಲೆಯ 22 ಪೊಲೀಸ್ ಠಾಣೆಗಳ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದ ವಾಹನಗಳ ಪರಿಶೀಲನೆಯ ಜವಾಬ್ದಾರಿಯನ್ನೂ ನಿರ್ವಹಿಸುತ್ತಿದ್ದಾರೆ.
ರಾಜ್ಯ ಸರ್ಕಾರಕ್ಕೆ ವಾರ್ಷಿಕ 312ರೂ. ಕೋಟಿ ಆದಾಯ ಸಂಗ್ರಹಿಸುವ ಗುರಿ ಹೊಂದಿರುವ ಉಡುಪಿ ಆರ್‌ಟಿಒ ಕಚೇರಿಯಲ್ಲಿ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸದಿರುವುದು ಸಾರ್ವಜನಿಕರಿಗೆ ತೀವ್ರ ಸಮಸ್ಯೆಯಾಗುತ್ತಿದೆ ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.
ಬ್ರಹ್ಮಾವರ ತಾಲೂಕು ರಚನೆಯಾಗಿ ಹಲವು ವರ್ಷಗಳು ಕಳೆದರೂ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಬೇಡಿಕೆಯಂತೆ ಅಲ್ಲಿಯೇ ಆರ್‌ಟಿಒ ಕ್ಯಾಂಪ್ ಆರಂಭಿಸಲು ಸಿಬ್ಬಂದಿ ಕೊರತೆಯೇ ಅಡ್ಡಿಯಾಗಿದ್ದು, ಇದರಿಂದ ಕಾರ್ಮಿಕ ವರ್ಗದ ಚಾಲಕರು ಕಚೇರಿ ಕೆಲಸಗಳಿಗಾಗಿ ಉಡುಪಿಗೆ ಪದೇಪದೇ ಆಗಮಿಸಬೇಕಾದ ಅನಿವಾರ್ಯತೆ ಎದುರಿಸುತ್ತಿದ್ದಾರೆ ಎಂದರು.
ಖಾಲಿ ಹುದ್ದೆಗಳ ಕುರಿತು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದ ಶಾಸಕ ಯಶ್ಪಾಲ್ ಸುವರ್ಣ ಅವರು, ಶೀಘ್ರದಲ್ಲೇ ಸಾರಿಗೆ ಸಚಿವರನ್ನು ಭೇಟಿ ಮಾಡಿ ಅಗತ್ಯ ಸಿಬ್ಬಂದಿ ನೇಮಕಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು. ಅಲ್ಲದೆ, ಕಚೇರಿಗೆ ಆಗಮಿಸುವ ಸಾರ್ವಜನಿಕರಿಗೆ ಸಾಧ್ಯವಾದಷ್ಟು ಶೀಘ್ರ ಹಾಗೂ ಸುಗಮ ಸೇವೆ ಒದಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಆರ್‌ಟಿಒ ಕಚೇರಿ ಆವರಣದಲ್ಲಿ ಗಿಡಗಂಟಿಗಳು ಬೆಳೆದಿರುವುದನ್ನು ಗಮನಿಸಿದ ಶಾಸಕರು, ತಕ್ಷಣವೇ ಅವುಗಳನ್ನು ತೆರವುಗೊಳಿಸಿ ಕಚೇರಿ ಪರಿಸರದಲ್ಲಿ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.