ಶಾರ್ಟ್ ಸರ್ಕ್ಯೂಟ್: ಮನೆಗೆ ಬೆಂಕಿ, 3 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮ
Thursday, July 02, 2026
ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಮನೆಯೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮಠ ಸಮೀಪ ನಡೆದಿದೆ.
ಮಠ ನಿವಾಸಿ ಆದಂ ಅವರ ಮನೆಗೆ ಬುಧವಾರ ಸಂಜೆ ಬೆಂಕಿ ತಗುಲಿ ಸುಮಾರು 3 ಲಕ್ಷಕ್ಕೂ ಅಧಿಕ ಮೌಲ್ಯದ ಸೊತ್ತುಗಳು ಸುಟ್ಟು ಹೋಗಿವೆ. ಮನೆಯಲ್ಲಿದ್ದ ದೂರದರ್ಶನ, ವಿವಿಧ ವಿದ್ಯುತ್ ಉಪಕರಣಗಳು, ಕಪಾಟು, ಬಟ್ಟೆ-ಬರೆ, ಅಗತ್ಯ ದಾಖಲೆ ಪತ್ರಗಳು ಹಾಗೂ ವಿದ್ಯುತ್ ಸಂಪರ್ಕದ ವೈರ್‌ಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಇದರಿಂದ ಕುಟುಂಬಕ್ಕೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಘಟನೆ ಸಂಭವಿಸಿದ ವೇಳೆ ಮನೆಯ ಮಾಲೀಕ ಆದಂ ಅವರು ತಮ್ಮ ಪತ್ನಿಯನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿಗೆ ಕರೆದುಕೊಂಡು ಹೋಗಿದ್ದು, ಅವರೊಂದಿಗೆ ಪುತ್ರಿಯೂ ತೆರಳಿದ್ದರು. ಈ ಸಂದರ್ಭ ಶಾಲೆಯಿಂದ ಮನೆಗೆ ಬಂದಿದ್ದ ಮೊಮ್ಮಕ್ಕಳು ಮಾತ್ರ ಮನೆಯಲ್ಲಿದ್ದರು.
ಮನೆಯೊಳಗೆ ಹೊಗೆ ಆವರಿಸಿ ಬೆಂಕಿ ಕಾಣಿಸಿಕೊಂಡ ತಕ್ಷಣ ಮಕ್ಕಳು ನೆರೆಯ ನಿವಾಸಿಗಳಿಗೆ ವಿಷಯ ತಿಳಿಸಿದ್ದಾರೆ. ಸ್ಥಳೀಯರು ಕೂಡಲೇ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಿದರು.