'ವಿಕಸಿತ ಭಾರತ' ಮತ್ತು 'ವಿಶ್ವ ಗುರು ಭಾರತ' ಬಿಜೆಪಿಯ ಗುರಿ: ಕುತ್ಯಾರು ನವೀನ್ ಶೆಟ್ಟಿ
ವಿಕಸಿತ ಭಾರತ' ಹಾಗೂ 'ವಿಶ್ವ ಗುರು ಭಾರತ' ನಿರ್ಮಾಣವೇ ಬಿಜೆಪಿಯ ಪ್ರಮುಖ ಗುರಿಯಾಗಿದ್ದು, ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಹಾಗೂ ಸಾಧನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಹೇಳಿದರು.
ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಕೇವಲ ಚುನಾವಣೆ ಗೆಲ್ಲುವುದು ಬಿಜೆಪಿಯ ಉದ್ದೇಶವಲ್ಲ. ರಾಷ್ಟ್ರೀಯ ವಿಚಾರಧಾರೆಯಡಿ ದೇಶ ಮೊದಲಿನ ಚಿಂತನೆಯೊಂದಿಗೆ ಭಯಮುಕ್ತ ರಾಷ್ಟ್ರ ನಿರ್ಮಾಣ ಹಾಗೂ ವಿಕಸಿತ ಭಾರತದ ಪರಿಕಲ್ಪನೆಯನ್ನು ಸಾಕಾರಗೊಳಿಸುವುದು ಪಕ್ಷದ ಧ್ಯೇಯವಾಗಿದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಅವರ 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್' ತತ್ವದಡಿ ಕೇಂದ್ರ ಸರ್ಕಾರದ 12 ವರ್ಷಗಳ ಸಾಧನೆಗಳು ಹಾಗೂ ಜನಪರ ಯೋಜನೆಗಳನ್ನು ಸಮಾಜದ ಪ್ರತಿಯೊಂದು ವರ್ಗಕ್ಕೂ ತಲುಪಿಸುವ ಜವಾಬ್ದಾರಿ ಅಲ್ಪಸಂಖ್ಯಾತ ಮೋರ್ಚಾದ ಪದಾಧಿಕಾರಿಗಳ ಮೇಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರುಡಾಲ್ಫ್ ಡಿಸೋಜಾ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಪದಾಧಿಕಾರಿಗಳಿಗೆ ನಿಯುಕ್ತಿಪತ್ರಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನಾಯಕ್, ಪಕ್ಷದ ಸಂಘಟನೆ, ಪದಾಧಿಕಾರಿಗಳ ಜವಾಬ್ದಾರಿ ಹಾಗೂ ಸಂಘಟನಾತ್ಮಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾರ್ಯಕರ್ತರಾಗಿ ಜನಸೇವೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ ಎಂದರು.
ಅಲ್ಪಸಂಖ್ಯಾತ ಮೋರ್ಚಾದ ಮಾಜಿ ರಾಜ್ಯ ಕಾರ್ಯದರ್ಶಿ ಸಲೀಂ ಅಂಬಾಗಿಲು ಮಾತನಾಡಿ, ಬಿಜೆಪಿ ಆಡಳಿತದಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ವಿವಿಧ ಸೌಲಭ್ಯಗಳು ಮತ್ತು ಅವಕಾಶಗಳು ದೊರೆತಿದ್ದು, ಅಭಿವೃದ್ಧಿ ಪರ ಚಿಂತನೆಗೆ ಸಮುದಾಯ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ನೇತೃತ್ವದಲ್ಲಿ ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಸಮುದಾಯದ ಪ್ರಮುಖರ ಸಮಾಗಮದೊಂದಿಗೆ ಆಯೋಜಿಸಿದ್ದ 'ಮನ್ ಕೀ ಬಾತ್' ರಾಜ್ಯಮಟ್ಟದ ನೇರ ಪ್ರಸಾರ ವೀಕ್ಷಣಾ ಕಾರ್ಯಕ್ರಮಕ್ಕೆ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದ್ದು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದು ಕುತ್ಯಾರು ನವೀನ್ ಶೆಟ್ಟಿ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶೇಕ್ ಆಸಿಫ್ ಕಟಪಾಡಿ, ಮಹಮ್ಮದ್ ಅಪ್ಸರ್ ಉಚ್ಚಿಲ, ಉಪಾಧ್ಯಕ್ಷ ಚಿರಂಜೀವಿ ಜೈನ್, ಕೋಶಾಧಿಕಾರಿ ಗ್ಲೆನ್ ಮೋನಿಸ್, ಉಪಾಧ್ಯಕ್ಷ ಮೈಕಲ್ ಡಿಸೋಜ ಸೇರಿದಂತೆ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಸದಸ್ಯರು ಉಪಸ್ಥಿತರಿದ್ದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಗೀತೆ ಹಾಡಿದರು. ಚಿರಂಜೀವಿ ಜೈನ್ ಸ್ವಾಗತಿಸಿದರು. ಗ್ಲೆನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿ, ಮೈಕಲ್ ಡಿಸೋಜ ವಂದಿಸಿದರು.