ಜು.31ರಿಂದ ಆ.2ರವರೆಗೆ ಉಡುಪಿಯಲ್ಲಿ ‘ಸ್ವದೇಶಿ ಖಾದ್ಯ ಮೇಳ’
"ಸ್ವದೇಶಿ ಉತ್ಪನ್ನಗಳನ್ನು ಬೆಂಬಲಿಸಿ – ಸ್ಥಳೀಯ ಉದ್ಯಮಿಗಳನ್ನು ಪ್ರೋತ್ಸಾಹಿಸಿ" ಎಂಬ ಧ್ಯೇಯದೊಂದಿಗೆ ಜುಲೈ 31ರಿಂದ ಆಗಸ್ಟ್ 2ರವರೆಗೆ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಮೂರು ದಿನಗಳ ‘ಸ್ವದೇಶಿ ಖಾದ್ಯ ಮೇಳ’ ಆಯೋಜಿಸಲಾಗಿದೆ.
ಸಮಾಜ ಸೇವಕ, ಕಾಂಗ್ರೆಸ್ ಮುಖಂಡ ಹಾಗೂ ವಿವಿಧ ದೈವ-ದೇವಸ್ಥಾನಗಳ ಜೀರ್ಣೋದ್ಧಾರದ ರೂವಾರಿಯಾಗಿರುವ, ಕನ್ನರ್ಪಾಡಿ ಜಯದುರ್ಗ ಪರಮೇಶ್ವರಿ ದೇವಸ್ಥಾನದ ನಿಕಟಪೂರ್ವ ಅಧ್ಯಕ್ಷ ಕೆ. ಕೃಷ್ಣಮೂರ್ತಿ ಆಚಾರ್ಯ ಅವರ ಸಾರಥ್ಯದಲ್ಲಿ ಮೇಳ ನಡೆಯಲಿದೆ. ಇಂದು ಉಡುಪಿಯ ಮಥುರಾ ಕಂಫರ್ಟ್ ನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಕೃಷ್ಣಮೂರ್ತಿ ಆಚಾರ್ಯ ಅವರು ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.
ಪ್ರತಿದಿನ ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ನಡೆಯಲಿರುವ ಈ ಮೇಳದಲ್ಲಿ ಸ್ವದೇಶಿ ತಿಂಡಿ-ತಿನಿಸುಗಳು, ತುಳುನಾಡಿನ ವಿಶೇಷ ಆಹಾರ ಪದಾರ್ಥಗಳು, ವಿವಿಧ ಬಗೆಯ ದೋಸೆಗಳು, ಹಲಸಿನ ಹಣ್ಣಿನಿಂದ ತಯಾರಿಸಲಾದ ವೈವಿಧ್ಯಮಯ ಖಾದ್ಯಗಳು, ಮಳೆಗಾಲದ ವಿಶೇಷ ತಿನಿಸುಗಳು ಹಾಗೂ ಸ್ಥಳದಲ್ಲೇ ತಯಾರಿಸಿ ನೀಡುವ ಹಲವು ಲೈವ್ ಫುಡ್‌ಗಳು ಲಭ್ಯವಿರಲಿವೆ.
ಇದರ ಜೊತೆಗೆ ಸಾವಯವ ಉತ್ಪನ್ನಗಳು, ಕರಕುಶಲ ವಸ್ತುಗಳು, ಫ್ಯಾನ್ಸಿ ವಸ್ತುಗಳು, ಗೃಹೋಪಯೋಗಿ ಸಾಮಗ್ರಿಗಳು ಸೇರಿದಂತೆ ವಿವಿಧ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟವೂ ನಡೆಯಲಿದೆ.
ಮೂರು ದಿನಗಳ ಈ ಮೇಳದಲ್ಲಿ ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸ್ಥಳೀಯ ಉದ್ಯಮಿಗಳು ಮತ್ತು ಸಣ್ಣ ವ್ಯಾಪಾರಿಗಳಿಗೆ ತಮ್ಮ ಉತ್ಪನ್ನಗಳನ್ನು ಪರಿಚಯಿಸಿ ವ್ಯಾಪಾರ ವಿಸ್ತರಿಸಿಕೊಳ್ಳಲು ವೇದಿಕೆ ಕಲ್ಪಿಸುವುದು, ಸ್ಥಳೀಯ ರೈತರಿಗೆ ಪ್ರೋತ್ಸಾಹ ನೀಡುವುದು, ಸಾವಯವ ಉತ್ಪನ್ನಗಳ ಬಳಕೆಯನ್ನು ಉತ್ತೇಜಿಸುವುದು ಹಾಗೂ ಆರೋಗ್ಯಕರ ಸ್ವದೇಶಿ ಆಹಾರ ಮತ್ತು ಉತ್ಪನ್ನಗಳ ಕುರಿತು ಜನಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಕೃಷಿಕರ ಸಂಘದ ಉಪಾಧ್ಯಕ್ಷ ಶ್ರೀನಿವಾಸ್ ಬಲ್ಲಾಳ್, ಅಮೃತ ಕೃಷ್ಣಮೂರ್ತಿ, ದಯಾನಂದ ಕಪ್ಪೆಟ್ಟು, ಸುನಿಲ್ ಕುಮಾರ್ ಕಪ್ಪೆಟ್ಟು, ಗುರು ಪ್ರಸಾದ್, ಸಂತೋಷ್, ರವೀಂದ್ರ, ಹರೀಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.