ಯಾರು ಭಾರತ್ ಜೋಡೋ ಸಂಘದ ಸದಸ್ಯರಾಗಬಹುದು? ಕಾರ್ಯಕಾರಿ ಸಮಿತಿಯ ಮೀಸಲಾತಿ ಹೇಗಿದೆ? ಅನುದಾನ ಎಷ್ಟು? ನೋಂದಣಿ ಹೇಗೆ? ಜಿ.ಪಂ ಸಿಇಒ ಪ್ರತೀಕ್ ಬಾಯಲ್ ಮಾಹಿತಿ
ಯುವಜನರಲ್ಲಿ ನಾಯಕತ್ವ ಗುಣ, ಸಾಮಾಜಿಕ ಹೊಣೆಗಾರಿಕೆ, ಸಾಮರಸ್ಯ, ಕ್ರೀಡಾ ಮನೋಭಾವ ಹಾಗೂ ಸಮುದಾಯ ಸೇವೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ಮಾರ್ಗದರ್ಶನದಲ್ಲಿ 'ಭಾರತ್ ಜೋಡೋ ಯುವ ಸಂಘಗಳನ್ನ' ಸ್ಥಾಪಿಸಲು ಪಾಲಿಸಬೇಕಾದ ಮಾರ್ಗಸೂಚಿಗಳ ಕುರಿತು ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾಹಿತಿ ನೀಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಸಂಕೀರ್ಣದ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಸಮಿತಿಗಳ ಅಧ್ಯಕ್ಷರು, ಜಿಲ್ಲಾಮಟ್ಟದ ಅಧಿಕಾರಿಗಳು, ತಾಲೂಕು ತಹಸೀಲ್ದಾರರು, ನಗರಸಭೆ, ಪುರಸಭೆಗಳ ಆಯುಕ್ತರು, ಪಿಡಿಒ ಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ ಅಭಿವೃದ್ಧಿಗಾಗಿ ಯುವಜನರ ಸಾಮರ್ಥ್ಯವನ್ನು ಸಕಾರಾತ್ಮಕವಾಗಿ ಬಳಸಿಕೊಳ್ಳುವ ಮೂಲಕ ಸಮಾಜದಲ್ಲಿ ಉತ್ತಮ ಬದಲಾವಣೆ ತರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯುವ ಸಂಘಗಳು ಯುವಕರಲ್ಲಿ ನಾಯಕತ್ವ ಗುಣ, ಶಿಸ್ತು ಹಾಗೂ ಸಾಮಾಜಿಕ ಬದ್ಧತೆಯನ್ನು ಬೆಳೆಸುವ ವೇದಿಕೆಯಾಗಬೇಕು ಎಂದು ಪ್ರತೀಕ್ ಬಾಯಲ್ ಹೇಳಿದರು.
"ಯುವ ಸಂಘಗಳ ರಚನೆ ಪ್ರಕ್ರಿಯೆಯು ನಿಯಮಾನುಸಾರವಾಗಿ, ಪಾರದರ್ಶಕ ಹಾಗೂ ಯಶಸ್ವಿಯಾಗಿ ನಡೆಯಬೇಕು. ಯುವಜನತೆಗೆ ಕ್ರೀಡೆ, ಕೌಶಲ್ಯಾಭಿವೃದ್ಧಿ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಲು ಇದೊಂದು ಉತ್ತಮ ವೇದಿಕೆಯಾಗಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖಾ ಅಧಿಕಾರಿಗಳು ಸಮನ್ವಯತೆಯಿಂದ ಕೆಲಸ ಮಾಡಬೇಕು" ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿ 4,000 ಜನಸಂಖ್ಯೆಗೆ ಒಂದರಂತೆ 'ಭಾರತ್ ಜೋಡೋ ಯುವ ಸಂಘ'ವನ್ನು ರಚಿಸಲಾಗುವುದು. 16ರಿಂದ 35 ವರ್ಷದೊಳಗಿನ ಯುವಕ ಯುವತಿಯರು ಈ ಸಂಘದ ಸದಸ್ಯರಾಗಲು ಅರ್ಹರಿರುತ್ತಾರೆ.
ಪ್ರತಿಯೊಂದು ಸಂಘದಲ್ಲಿ 15 ಜನ ಕಾರ್ಯಕಾರಿ ಸಮಿತಿ ಸದಸ್ಯರಿರುತ್ತಾರೆ. ಪಾರದರ್ಶಕತೆಗಾಗಿ ಲಾಟರಿ (ಚೀಟಿ ಎತ್ತುವ) ಪದ್ಧತಿಯ ಮೂಲಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಇದರಲ್ಲಿ ಮೂವರು ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದ ಸದಸ್ಯರು (ಓರ್ವ ಮಹಿಳೆ), ನಾಲ್ವರು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಸದಸ್ಯರು (ಓರ್ವ ಮಹಿಳೆ), 8 ಮಂದಿ ಸಾಮಾನ್ಯ ಸದಸ್ಯರು (ಮೂವರು ಮಹಿಳೆಯರು) ಹೀಗೆ ಮೀಸಲಾತಿ ಕಲ್ಪಿಸಲಾಗುವುದು ಎಂದರು.
ಯಾವುದೇ ಭಾರತ್ ಜೋಡೋ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು ಮುಂದಿನ ಎರಡು ವರ್ಷಗಳ ಅವಧಿಗೆ ಪುನರಾವರ್ತನೆಯಾಗಲು ಅವಕಾಶವಿರುವುದಿಲ್ಲ. ಸಂಘದ ಕಾರ್ಯಕಾರಿ ಸಮಿತಿಯು ಆಯಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳನ್ನು ಸಮವಾಗಿ ಪ್ರತಿನಿಧಿಸುವುದು ಎಂದು ತಿಳಿಸಿದರು.
ಸಭೆಯಲ್ಲಿ ಭಾರತ್ ಜೋಡೋ ಯುವ ಸಂಘಗಳ ಉದ್ದೇಶ, ರಚನೆ, ಕಾರ್ಯವ್ಯಾಪ್ತಿ ಹಾಗೂ ಯುವಜನರನ್ನು ಸಂಘಟಿಸಿ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸುವ ಕುರಿತು ಚರ್ಚಿಸಲಾಯಿತು. ಯುವಜನರಲ್ಲಿ ದೇಶಭಕ್ತಿ, ಸಾಮಾಜಿಕ ಜವಾಬ್ದಾರಿ, ರಾಷ್ಟ್ರೀಯ ಏಕತೆ ಹಾಗೂ ಸಹೋದರತ್ವದ ಭಾವನೆಗಳನ್ನು ಬೆಳೆಸುವ ನಿಟ್ಟಿನಲ್ಲಿ ಸಂಘಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಾಯಲ್ ಸೂಚಿಸಿದರು.
ಯುವ ಸಬಲೀಕರಣ ಹಾಗೂ ರಾಜ್ಯದಲ್ಲಿ ಒಟ್ಟು 10,000 ಭಾರತ್ ಜೋಡೋ ಯುವ ಸಂಘಗಳನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಸಂಘಗಳಿಗೆ ಪ್ರತಿ ವರ್ಷ ತಲಾ ರೂ. 10 ಲಕ್ಷಗಳ ಅನುದಾನದ ನೀಡಲಾಗುತ್ತದೆ ಎಂದರು.
ವೆಬ್ ಪೋರ್ಟಲ್ ಅಥವಾ ಮೊಬೈಲ್ ಆಪ್ ಮೂಲಕ ಅಥವಾ ಗ್ರಾಮ ಪಂಚಾಯಿತಿ ಹಾಗೂ ನಗರ ಪ್ರದೇಶಗಳಲ್ಲಿ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ನಾಗರೀಕ ಸೇವಾ ಕೇಂದ್ರಗಳ ಸಹಾಯದಿಂದ ಅರ್ಜಿ ಸಲ್ಲಿಸಬಹುದು. ಪ್ರತಿಯೊಬ್ಬ
ಸದಸ್ಯರ ನೋಂದಣಿಗೆ ಆಧಾರ್ ಕಡ್ಡಾಯವಾಗಿದೆ. 16 ವರ್ಷದಿಂದ 35 ವರ್ಷದವರೆಗಿನ ಯುವಕ ಯುವತಿಯರಿಗೆ ಸಂಘಗಳ ಸದಸ್ಯರಾಗಲು ಅವಕಾಶವಿದೆ. ಘಟಕ ರಚನೆಗೆ ಕನಿಷ್ಠ 100 ಯುವ ಸದಸ್ಯರಿರಬೇಕು. ಪ್ರತಿ ಸದಸ್ಯನಿಗೆ ನೋಂದಣಿ ಶುಲ್ಕ ರೂ. 10 ಇದ್ದು, ಪ್ರತಿಯೊಂದು ಸಂಘವನ್ನು ಕರ್ನಾಟಕ ಸೊಸೈಟಿಸ್ ರಿಜಿಸ್ಟ್ರೇಷನ್ ಆಕ್ಟ್ 1960 ಅಡಿಯಲ್ಲಿ ನೋಂದಾಯಿಸಬೇಕು. ಅರ್ಜಿದಾರರು ಅದೇ ಗ್ರಾಮದ ಪಂಚಾಯತ್ ವಾರ್ಡಿನ ಸಾಮಾನ್ಯ ನಿವಾಸಿ ಆಗಿರಬೇಕು. ಪ್ರತಿಯೊಬ್ಬ ಸದಸ್ಯರು ಒಂದು ಸಂಘಕ್ಕೆ ಮಾತ್ರ ಸದಸ್ಯರಾಗಲು ಅರ್ಹರಿರುತ್ತಾರೆ ಎಂದು ತಿಳಿಸಿದರು.
ಪ್ರತಿಯೊಂದು ಸಂಘವು ವಾರ್ಷಿಕ ಚಟುವಟಿಕೆಗಳ ಕ್ಯಾಲೆಂಡರ್ ತಯಾರಿಸಿ ಕ್ರೀಡೆ, ಫಿಟ್‌ನೆಸ್, ಸಮುದಾಯ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಕೌಶಲ್ಯಾಭಿವೃದ್ಧಿ ಇತ್ಯಾದಿ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುವುದು. ಸಂಘದ ಕಾರ್ಯಕ್ರಮಗಳಿಗೆ ಸಂಬಂಧಿಸಿದ ಪಾರದರ್ಶಕ ಲೆಕ್ಕಪತ್ರ, ನಿರ್ವಹಣೆ ಹಾಗೂ ಮೇಲ್ಕಂಡ ಕ್ಷೇತ್ರಗಳಲ್ಲಿನ ಪ್ರತಿಯೊಂದು ಚಟುವಟಿಕೆಯ ವರದಿಯನ್ನು ಜಿಯೋ-ಟ್ಯಾಗ್ ಮಾಡಿದ ಫೋಟೋಗಳೊಂದಿಗೆ ನಿಗದಿತ ಸಾಫ್‌ಟ್‌ವೇರ್‌ನಲ್ಲಿ ಅಪ್‌ಲೋಡ್ ಮಾಡಬೇಕು.
ಈ ಅವಕಾಶವನ್ನು ಜವಾಬ್ದಾರಿಯುತವಾಗಿ ಬಳಸಿ ಅನುದಾನ ಬಳಸುವಾಗ ಪಾರದರ್ಶಕತೆ ಕಾಪಾಡಿಕೊಳ್ಳಬೇಕು.
ಸರ್ಕಾರದ / ಸಮುದಾಯದ ಕಾರ್ಯಕ್ರಮಗಳಲ್ಲಿ ಸಕ್ರಿಯ ಸಹಯೋಗ ನೀಡಬೇಕು. ಸಮುದಾಯದಲ್ಲಿ ಏಕತೆ, ಸಾಮರಸ್ಯ ಮತ್ತು ಶಿಸ್ತಿನ ಕಾರ್ಯ ನಿರ್ವಹಣೆಯನ್ನು ಖಚಿತಪಡಿಸಬೇಕು. ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಕೆಲಸ ಮಾಡುವುದು, ಬಾಲ್ಯ ವಿವಾಹಗಳ ವಿರುದ್ಧ ಜಾಗೃತಿ ಮೂಡಿಸುವುದು, ಅಪೌಷ್ಟಿಕತೆಯನ್ನು ಹೋಗಲಾಡಿಸಲು ಕ್ರಮವಹಿಸುವುದು ಅಗತ್ಯ ಎಂದರು.
ಘಟಕಗಳ ನೊಂದಣಿ ಮತ್ತು ಸಾಪ್ಟವೇರ್ ಸಜ್ಜುಗೊಳಿಸುವಿಕೆಗಾಗಿ ಜುಲೈ 31, 2026 ರೊಳಗೆ ನೊಂದಣಿ ಮಾಡಿಸಬೇಕು ಎಂದು ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ರೋಶನ್ ಕುಮಾರ್ ಶೆಟ್ಟಿ ತಿಳಿಸಿದರು.
ಈ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಎಸ್. ಆರ್., ಜಿಲ್ಲಾ ಮಟ್ಟದ ಗ್ಯಾರಂಟಿ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮೊದಲಾದವರು ಹಾಜರಿದ್ದರು. ಜಿ.ಪಂ. ಕೋ-ಆರ್ಡಿನೇಟರ್ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು.