ಕೋರ್ಟ್ ಗೆ ಪದೇಪದೇ ಇ ಮೇಲ್ ಬೆದರಿಕೆ: ಭದ್ರತೆ ಬಲಪಡಿಸಲು ಹೊಸ ಕ್ರಮ- ಎಸ್‌ಪಿ ಹರಿರಾಂ ಶಂಕರ್
ನ್ಯಾಯಾಲಯಗಳಿಗೆ ಪದೇಪದೇ ನಕಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆಗಳು ಬರುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ಕಾರ್ಯಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ಹೊಸ ಭದ್ರತಾ ಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.
ಇನ್ನು ಮುಂದೆ ಪ್ರತಿದಿನ ಬೆಳಿಗ್ಗೆ ನ್ಯಾಯಾಲಯ ಆರಂಭವಾಗುವ ಮೊದಲು ನ್ಯಾಯಾಲಯದ ಆವರಣ ಹಾಗೂ ಕಟ್ಟಡವನ್ನು ಪೊಲೀಸರು ಸಂಪೂರ್ಣವಾಗಿ ಪರಿಶೀಲಿಸಲಿದ್ದಾರೆ. ಯಾವುದೇ ಅನುಮಾನಾಸ್ಪದ ವಸ್ತುಗಳು ಅಥವಾ ಸಾಮಗ್ರಿಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಂಡ ಬಳಿಕವೇ ನ್ಯಾಯಾಲಯದ ಕಾರ್ಯಾರಂಭಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದರು.
ಈ ಕ್ರಮದಿಂದ ಭವಿಷ್ಯದಲ್ಲಿ ನಕಲಿ ಬೆದರಿಕೆ ಇ-ಮೇಲ್‌ಗಳು ಬಂದರೂ ನ್ಯಾಯಾಲಯದ ಕಲಾಪ ಹಾಗೂ ದೈನಂದಿನ ಆಡಳಿತಾತ್ಮಕ ಕಾರ್ಯಚಟುವಟಿಕೆಗಳಿಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರೊಂದಿಗೆ ನಡೆದ ಚರ್ಚೆಯ ಆಧಾರದ ಮೇಲೆ, ಲಭ್ಯವಿರುವ ಸಿಬ್ಬಂದಿ ಹಾಗೂ ಸಂಪನ್ಮೂಲಗಳನ್ನು ಪರಿಗಣಿಸಿ ತಾತ್ಕಾಲಿಕವಾಗಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಅಗತ್ಯವಿರುವ ಸ್ಥಳಗಳಲ್ಲಿ ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್‌ಗಳನ್ನು ಅಳವಡಿಸಿ ನ್ಯಾಯಾಲಯಗಳ ಭದ್ರತೆಯನ್ನು ಇನ್ನಷ್ಟು ಬಲಪಡಿಸುವ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಇದೇ ವೇಳೆ, ನಕಲಿ ಬೆದರಿಕೆ ಇ-ಮೇಲ್‌ಗಳ ಮೂಲವನ್ನು ಪತ್ತೆಹಚ್ಚಲು ಇತರ ಜಿಲ್ಲೆಗಳ ಪೊಲೀಸ್ ಇಲಾಖೆ, ವಿವಿಧ ರಾಜ್ಯಗಳ ತನಿಖಾ ಸಂಸ್ಥೆಗಳು ಹಾಗೂ ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ನಿರಂತರ ಸಮನ್ವಯ ಸಾಧಿಸಿ ತನಿಖೆ ಮುಂದುವರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದ್ದಾರೆ.