ರಾಮಮಂದಿರ ಹಗರಣ: ಪೇಜಾವರ ಶ್ರೀಗಳು ಮೌನವೇಕೆ ?- ಉಗ್ರಪ್ಪ ಪ್ರಶ್ನೆ
ರಾಮಮಂದಿರದಲ್ಲಿ ನಡೆದಿರುವ ಹಗರಣಗಳ ಬಗ್ಗೆ ಪೇಜಾವರ ಶ್ರೀಗಳು ಮೌನ ವಹಿಸಿರುವುದು ಏಕೆ..? ಈ ಪ್ರಕರಣದಲ್ಲಿ ನಿಮ್ಮ ಪಾತ್ರವೂ ಇದೆಯೇ?" ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಪ್ರಶ್ನಿಸಿದ್ದಾರೆ.
ಉಡುಪಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಮ, ಕ್ರೋಧ, ಲೋಭ, ಮೋಹ ತ್ಯಜಿಸಿರುವ ಪೇಜಾವರ ಶ್ರೀಗಳು ರಾಮಮಂದಿರ ಹಗರಣದ ಬಗ್ಗೆ ಯಾಕೆ ಬಾಯಿಬಿಡುತ್ತಿಲ್ಲ? ಈ ಪ್ರಕರಣದಲ್ಲಿ ನಿಮ್ಮದು ಪಾತ್ರವಿದೆಯೇ?" ಎಂದು ಪ್ರಶ್ನಿಸಿದರು.
ರಾಮಮಂದಿರ ಹಗರಣಗಳಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೇರ ಹೊಣೆ ಎಂದ ಉಗ್ರಪ್ಪ, "ಮರ್ಯಾದಾ ಪುರುಷೋತ್ತಮನ ದೇವಸ್ಥಾನವನ್ನೇ ಲೂಟಿ ಮಾಡಿದವರು ದೇಶವನ್ನು ಲೂಟಿ ಮಾಡದೇ ಬಿಡುತ್ತಾರೆಯೇ?" ಎಂದು ಅವರು ಟೀಕಿಸಿದರು.
ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್ ದೇಶವನ್ನು ಲೂಟಿ ಮಾಡುತ್ತಿರುವ ಸಂಘಟನೆಗಳಾಗಿವೆ ಎಂದು ಆರೋಪಿಸಿದ ಅವರು, ಪೇಜಾವರ ಶ್ರೀಗಳಿಗೆ ನೈತಿಕತೆ ಇದ್ದರೆ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, "ರಾಮನ ಮೇಲೆ ಕಿಂಚಿತ್ತಾದರೂ ಗೌರವವಿದ್ದರೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಉಗ್ರಪ್ಪ, ರಾಮಮಂದಿರಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ದೇಶದ ಜನರ ಮುಂದಿಡಬೇಕು ಎಂದು ಆಗ್ರಹಿಸಿದರು.