ನಮ್ಮನ್ನು ಉಳಿಸಿಕೊಳ್ಳುವುದಕ್ಕಾದರೂ ಮರ-ಗಿಡಗಳನ್ನು ಬೆಳೆಸೋಣ: ಕೇಶವ ಪೂಜಾರಿ
ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ವೈಯಕ್ತಿಕ ಜವಾಬ್ದಾರಿಯಾಗಿದ್ದು, ನಮ್ಮನ್ನು ನಾವು ಉಳಿಸಿಕೊಳ್ಳುವುದಕ್ಕಾದರೂ ಮರ-ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಬೇಕು ಎಂದು ಉಡುಪಿ ಗಸ್ತು ಅರಣ್ಯ ಪಾಲಕರಾದ ಕೇಶವ ಪೂಜಾರಿ ಕರೆ ನೀಡಿದರು.
ಅವರು ಸೇವಾ ಮತ್ತು ಸಾಂಸ್ಕೃತಿಕ ವೇದಿಕೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಉದ್ಯಾವರ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ವಿವಿಧ ಜಾತಿಯ ಗಿಡಗಳ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಂದು ನಾವು ಉಸಿರಾಡುವ ಆಮ್ಲಜನಕದ ಪ್ರಮುಖ ಮೂಲ ಮರಗಳಾಗಿದ್ದು, ಒಬ್ಬ ವ್ಯಕ್ತಿಗೆ ಸರಾಸರಿ 6ರಿಂದ 7 ಮರಗಳಿಂದ ಉತ್ಪತ್ತಿಯಾಗುವ ಆಮ್ಲಜನಕ ಅಗತ್ಯವಿದೆ. ಅಭಿವೃದ್ಧಿಯ ಹೆಸರಿನಲ್ಲಿ ನಿರಂತರವಾಗಿ ಮರಗಳನ್ನು ಕಡಿದು ಹಾಕಿದರೆ ಮುಂದಿನ ದಿನಗಳಲ್ಲಿ ಆಮ್ಲಜನಕದ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.
"ಪರಿಸರವನ್ನು ನಾವು ರಕ್ಷಿಸುತ್ತೇವೆ ಎನ್ನುವುದಕ್ಕಿಂತ ನಾನು ಪರಿಸರವನ್ನು ರಕ್ಷಿಸುತ್ತೇನೆ ಎಂಬ ಸಂಕಲ್ಪ ಪ್ರತಿಯೊಬ್ಬರಲ್ಲೂ ಮೂಡಬೇಕು. ಒಂದು ಗಿಡವನ್ನು ನೆಟ್ಟು ಕನಿಷ್ಠ ಮೂರು ವರ್ಷಗಳ ಕಾಲ ಆರೈಕೆ ಮಾಡಿದರೆ ಅದು ನೂರು ವರ್ಷಗಳ ಕಾಲ ಸಮಾಜಕ್ಕೆ ನೆರಳಾಗಿ, ಆಮ್ಲಜನಕ ನೀಡಿ, ಪರಿಸರವನ್ನು ಸಮತೋಲನದಲ್ಲಿರಿಸುತ್ತದೆ" ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ಸುಮಾರು 44 ಶೇಕಡಾ ಕಾಡು ಪ್ರದೇಶವಿದ್ದರೆ, ಈಗ ಅದು ಸುಮಾರು 24 ಶೇಕಡಕ್ಕೆ ಇಳಿದಿದೆ. ಕರ್ನಾಟಕದಲ್ಲಿಯೂ ಕಾಡು ಪ್ರದೇಶದ ಪ್ರಮಾಣ ಆತಂಕಕಾರಿ ಮಟ್ಟದಲ್ಲಿದ್ದು, ಪ್ರಕೃತಿಯ ಸಮತೋಲನ ಕಾಪಾಡಲು ಎಲ್ಲರೂ ಮರಗಳನ್ನು ಬೆಳೆಸುವ ಅಭಿಯಾನದಲ್ಲಿ ಕೈಜೋಡಿಸಬೇಕು ಎಂದು ಹೇಳಿದರು.
ಉಡುಪಿ ಉಪ ಅರಣ್ಯಾಧಿಕಾರಿ ಮಹಮ್ಮದ್ ಜುನೈದ್ ಪರಿಸರ ಸಂರಕ್ಷಣೆಯ ಮಹತ್ವದ ಕುರಿತು ಮಾತನಾಡಿದರು.
ಶಾಲಾ ಮುಖ್ಯ ಶಿಕ್ಷಕಿ ಅನುರಾಧ ಪಿ. ಶೆಟ್ಟಿ ಕಾರ್ಯಕ್ರಮದ ಉದ್ದೇಶ ಹಾಗೂ ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಗೌರವಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಮಾತನಾಡಿ, ಆಧುನೀಕರಣದ ಭರಾಟೆಯಲ್ಲಿ ಪರಿಸರಕ್ಕೆ ಆಗುತ್ತಿರುವ ಹಾನಿ ಮುಂದಿನ ಪೀಳಿಗೆಯ ಬದುಕಿಗೆ ಅಪಾಯವನ್ನುಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯು ಹಲವು ವರ್ಷಗಳಿಂದ ಗಿಡ ವಿತರಣೆ ಮಾತ್ರವಲ್ಲದೆ, ವಿದ್ಯಾರ್ಥಿಗಳು ನೆಟ್ಟ ಗಿಡಗಳ ಬೆಳವಣಿಗೆಯನ್ನು ಪರಿಶೀಲಿಸಿ ಉತ್ತಮವಾಗಿ ಬೆಳೆಸಿದವರಿಗೆ ಬಹುಮಾನ ನೀಡುವ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಸಂಸ್ಥೆಯ ನಿರ್ದೇಶಕರಾದ ಚಂದ್ರಾವತಿ ಎಸ್. ಭಂಡಾರಿ ಹಾಗೂ ಯು. ಪದ್ಮನಾಭ ಕಾಮತ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕೋಶಾಧಿಕಾರಿ ಸತೀಶ್ ಡಿ. ಸಾಲ್ಯಾನ್, ಉಪಾಧ್ಯಕ್ಷ ಶ್ರೀಧರ ಮಾಬಿಯಾನ್, ಕಾರ್ಯದರ್ಶಿ ಭಾಸ್ಕರ ಬಂಗೇರ, ಮಾಜಿ ಪಂಚಾಯತ್ ಸದಸ್ಯರಾದ ನಿತಿನ್ ಜೆ. ಸಾಲ್ಯಾನ್ ಮತ್ತು ಆಬಿದ್ ಆಲಿ, ಸದಸ್ಯ ಪ್ರೇಮ್ ಮಿನೇಜಸ್, ಶಾಲೆಯ ಶಿಕ್ಷಕ ವೃಂದ ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಸುಮಾರು 150 ವಿದ್ಯಾರ್ಥಿಗಳಿಗೆ ವಿವಿಧ ಜಾತಿಯ ಗಿಡಗಳನ್ನು ಉಚಿತವಾಗಿ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಗಿರೀಶ್ ಗುಡ್ಡೆಯಂಗಡಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ರಿಯಾಝ್ ಪಳ್ಳಿ ವಂದಿಸಿದರು. ಮಾಜಿ ಅಧ್ಯಕ್ಷ ಅನುಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
