ಮಣಿಪಾಲ ಶಾಲಾ ಬಸ್ ಅಪಘಾತ: ಗಾಯಾಳು ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದ ಶಾಸಕ ಯಶ್ಪಾಲ್ ಸುವರ್ಣ
ಮಣಿಪಾಲದ ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಶಾಲಾ ಬಸ್ ಅಪಘಾತಕ್ಕೀಡಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿಗಳನ್ನು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಅವರು ಭೇಟಿಯಾದರು.
ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರು ಹಾಗೂ ಪೋಷಕರಿಂದ ಮಾಹಿತಿ ಪಡೆದುಕೊಂಡರು.
ಆಸ್ಪತ್ರೆಯಲ್ಲಿ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಶಾಸಕ ಯಶ್ ಪಾಲ್ ಸುವರ್ಣ, ವಿದ್ಯಾರ್ಥಿಗಳಿಗೆ ಅಗತ್ಯವಿರುವ ಎಲ್ಲಾ ರೀತಿಯ ಚಿಕಿತ್ಸೆಯನ್ನು ಸಮರ್ಪಕವಾಗಿ ಒದಗಿಸುವಂತೆ ಸೂಚಿಸಿದರು. ಅಲ್ಲದೆ, ಗಾಯಗೊಂಡ ವಿದ್ಯಾರ್ಥಿಗಳ ಶೀಘ್ರ ಚೇತರಿಕೆಗೆ ಹಾರೈಸಿ, ಅವರ ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳ ಅವಧಿಯಲ್ಲಿ ಉಡುಪಿ ನಗರ ವ್ಯಾಪ್ತಿಯಲ್ಲಿ ಮೂರು ಶಾಲಾ ಬಸ್ ಅಪಘಾತ ಪ್ರಕರಣಗಳು ವರದಿಯಾಗಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು. ವಿದ್ಯಾರ್ಥಿಗಳ ಸುರಕ್ಷತೆಯನ್ನು ಅತ್ಯುನ್ನತ ಆದ್ಯತೆಯಾಗಿ ಪರಿಗಣಿಸಿ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಶಾಲಾ ವಾಹನಗಳ ಸುರಕ್ಷತಾ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡುವಂತೆ ಅವರು ಆಗ್ರಹಿಸಿದರು.
ಆಸ್ಪತ್ರೆ ಭೇಟಿಯ ವೇಳೆ ಉಡುಪಿ ನಗರ ಬಿಜೆಪಿ ಅಧ್ಯಕ್ಷ ದಿನೇಶ್ ಅಮೀನ್, ಕಾರ್ಯದರ್ಶಿ ಗುರುರಾಜ್ ಭಂಡಾರಿ, ಯುವ ಮೋರ್ಚಾ ಅಧ್ಯಕ್ಷ ಶ್ರೀವತ್ಸ, ಪದಾಧಿಕಾರಿ ನಿತಿನ್ ಪೈ ಸೇರಿದಂತೆ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.