ಕೋಟೇಶ್ವರ ಬಳಿ ಬೈಕ್ ಗೆ ಲಾರಿ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು
ರಾಷ್ಟ್ರೀಯ ಹೆದ್ದಾರಿ–66ರ ಕೋಟೇಶ್ವರ ಸಮೀಪದ ಕಿನಾರಾ ಜಂಕ್ಷನ್ ಬಳಿ ಗುರುವಾರ ಮಧ್ಯಾಹ್ನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ದುರ್ಘಟನೆ ನಡೆದಿದೆ.
ಮೃತರನ್ನು ಇಡೂರು ಕುಂಜಾಡಿ ಗ್ರಾಮದ ಜನ್ನಲ್ ಕೊಳ್ತ ನಿವಾಸಿ ಭರತ್ ಶೆಟ್ಟಿ (33) ಎಂದು ಗುರುತಿಸಲಾಗಿದೆ. ಅವರು ಕೋಟೇಶ್ವರ ಸಮೀಪದ ಖಾಸಗಿ ಪೇಂಟಿಂಗ್ ಅಂಗಡಿಯಲ್ಲಿ ಸೇಲ್ಸ್ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಕೆಲಸದ ನಿಮಿತ್ತ ಕೋಟೇಶ್ವರದಿಂದ ಕುಂದಾಪುರದತ್ತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ.
ಮಾಹಿತಿಯ ಪ್ರಕಾರ, ಲಾರಿ ಚಾಲಕ ಬಾಲ ಮುರುಗನ್ ರಸ್ತೆಯ ಬಲಭಾಗದಲ್ಲಿ ಸಂಚರಿಸುತ್ತಿದ್ದ ವಾಹನವನ್ನು ಎಡಭಾಗದಿಂದ ಅಪಾಯಕಾರಿಯಾಗಿ ಓವರ್‌ಟೇಕ್ ಮಾಡಲು ಮುಂದಾದ ವೇಳೆ, ಮುಂಭಾಗದಲ್ಲಿ ಸಾಗುತ್ತಿದ್ದ ಭರತ್ ಶೆಟ್ಟಿ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.
ಡಿಕ್ಕಿಯ ರಭಸಕ್ಕೆ ಭರತ್ ಶೆಟ್ಟಿ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದರು. ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡ ಅವರನ್ನು ತಕ್ಷಣ ಕುಂದಾಪುರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ಭರತ್ ಶೆಟ್ಟಿ ಅವರಿಗೆ ಕೇವಲ ಒಂದು ವರ್ಷದ ಹಿಂದಷ್ಟೇ ವಿವಾಹವಾಗಿತ್ತು.ಘಟನೆಯ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.