ಮಣಿಪಾಲದಲ್ಲಿ ಕುಡಿಯುವ ನೀರಿನ ಘಟಕಕ್ಕೆ ಕಾರು ಡಿಕ್ಕಿ: ವಿದ್ಯಾರ್ಥಿಗಳಿಗೆ ಗಾಯ
Monday, July 13, 2026
ಮಣಿಪಾಲದ ಈಶ್ವರನಗರದಲ್ಲಿರುವ ನಗರಸಭೆಯ ಶುದ್ಧ ಕುಡಿಯುವ ನೀರಿನ ಘಟಕದ ಆವರಣಕ್ಕೆ ಕಾರೊಂದು ನುಗ್ಗಿ, ಕಾರಿನಲ್ಲಿದ್ದ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಮಧ್ಯರಾತ್ರಿ ನಡೆದಿದೆ.
ಮಣಿಪಾಲದಿಂದ ಆತ್ರಾಡಿ ಕಡೆಗೆ ರಾಷ್ಟ್ರೀಯ ಹೆದ್ದಾರಿ 169A ಮೂಲಕ ಸಾಗುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಿಂದ ಹೊರಬಂದು ನೇರವಾಗಿ ಕುಡಿಯುವ ನೀರಿನ ಘಟಕದ ಆವರಣಕ್ಕೆ ನುಗ್ಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಏರ್‌ಬ್ಯಾಗ್‌ಗಳು ತೆರೆದಿದ್ದು, ಕಾರಿನಲ್ಲಿದ್ದವರಿಗೆ ತಲೆಗೆ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕಾರಿನಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.
ಅಪಘಾತದ ಪರಿಣಾಮ ಕುಡಿಯುವ ನೀರಿನ ಘಟಕದ ಆವರಣದ ಭಾಗಕ್ಕೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಸ್ಥಳೀಯರು ಧಾವಿಸಿ ಗಾಯಾಳುಗಳ ರಕ್ಷಣೆಗೆ ಸಹಕರಿಸಿದರು.
ಇದೇ ಪ್ರದೇಶದಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ರಾಷ್ಟ್ರೀಯ ಹೆದ್ದಾರಿ 169A ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅಗತ್ಯ ತಡೆಗೋಡೆಗಳು, ಪ್ರತಿಫಲಕಗಳು ಹಾಗೂ ಎಚ್ಚರಿಕೆ ಸೂಚನಾ ಫಲಕಗಳ ಕೊರತೆಯೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಪ್ರದೇಶದಲ್ಲಿ ಅಪಘಾತಗಳನ್ನು ತಡೆಯಲು ಹೆದ್ದಾರಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸಾರ್ವಜನಿಕರು ಸಂಬಂಧಿಸಿದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
