-->
 ಮಾಹೆ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಡಾ. ಕರುಣಾಕರ್ ಎ. ಕೋಟೆಗಾರ್ ನೇಮಕ

ಮಾಹೆ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಡಾ. ಕರುಣಾಕರ್ ಎ. ಕೋಟೆಗಾರ್ ನೇಮಕ


ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (MAHE)ಯ ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ಡಾ. ಕರುಣಾಕರ್ ಎ. ಕೋಟೆಗಾರ್ ಅವರನ್ನು ನೇಮಕ ಮಾಡಲಾಗಿದೆ.  

ತಂತ್ರಜ್ಞಾನ ಮತ್ತು ವಿಜ್ಞಾನ ವಿಭಾಗದ ಸಹ ಕುಲಪತಿಯಾಗಿ ತಮ್ಮ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಡಾ. ನಾರಾಯಣ ಸಭಾಹಿತ್ ಅವರು ಇನ್ನು ಮುಂದೆ ವಿಶ್ವವಿದ್ಯಾಲಯದ ಸಲಹಾಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಶಿಕ್ಷಣತಜ್ಞ ಹಾಗೂ ಆಡಳಿತಗಾರರಾಗಿರುವ ಡಾ. ಕರುಣಾಕರ್ ಎ. ಕೋಟೆಗಾರ್ ಅವರು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಬೋಧನೆ, ಸಂಶೋಧನೆ, ಶೈಕ್ಷಣಿಕ ನಾಯಕತ್ವ ಹಾಗೂ ಅಂತಾರಾಷ್ಟ್ರೀಯ ಸಹಯೋಗಗಳಲ್ಲಿ 29 ವರ್ಷಗಳಿಗೂ ಹೆಚ್ಚಿನ ಅನುಭವ ಹೊಂದಿದ್ದಾರೆ. ಅವರು 2024ರ ಅಕ್ಟೋಬರ್‌ನಿಂದ ಜೈಪುರದ ಮಣಿಪಾಲ್ ಕ್ಯಾಂಪಸ್‌ನಲ್ಲಿ ಪ್ರೊ-ಪ್ರೆಸಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು.

ಈ ಹಿಂದೆ ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (MIT) ಡೇಟಾ ಸೈನ್ಸ್ ಮತ್ತು ಕಂಪ್ಯೂಟರ್ ಅಪ್ಲಿಕೇಶನ್ಸ್ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದ ಅವರು, ಅಂತಾರಾಷ್ಟ್ರೀಯ ಮಟ್ಟದ ಜರ್ನಲ್‌ಗಳು ಹಾಗೂ ಸಮ್ಮೇಳನಗಳಲ್ಲಿ 75ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ. ಒಂಬತ್ತು ಪಿಎಚ್.ಡಿ. ಸಂಶೋಧಕರಿಗೆ ಮಾರ್ಗದರ್ಶನ ನೀಡಿರುವ ಅವರು, ಪ್ರಸ್ತುತವೂ ಹಲವಾರು ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಾಗತಿಕ ಶೈಕ್ಷಣಿಕ ವಲಯದಲ್ಲಿಯೂ ಸಕ್ರಿಯರಾಗಿರುವ ಡಾ. ಕೋಟೆಗಾರ್ ಅವರು ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್ (IEEE) ಸಂಸ್ಥೆಯ ಹಿರಿಯ ಸದಸ್ಯರಾಗಿದ್ದು, ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್ (ISTE) ಸಂಸ್ಥೆಯ ಆಜೀವ ಸದಸ್ಯರಾಗಿದ್ದಾರೆ. ಐಎಸ್‌ಟಿಇಯಲ್ಲಿ ತಮ್ಮ ನಾಯಕತ್ವದ ಮೂಲಕ ಉನ್ನತ ಶಿಕ್ಷಣದ ಅಂತಾರಾಷ್ಟ್ರೀಕರಣಕ್ಕೆ ಗಮನಾರ್ಹ ಕೊಡುಗೆ ನೀಡಿದ್ದಾರೆ.

ಇದಲ್ಲದೆ, ಉನ್ನತ ಶಿಕ್ಷಣ ಮತ್ತು ಶೈಕ್ಷಣಿಕ ಆಡಳಿತ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಪರಿಗಣಿಸಿ, ಕರ್ನಾಟಕ ರಾಜ್ಯಪಾಲರ ನಾಮನಿರ್ದೇಶನದ ಮೇರೆಗೆ ಅವರು ಜೂನ್ 2020ರಿಂದ ಜೂನ್ 2023ರವರೆಗೆ ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.


Ads on article

Advertise in articles 1

advertising articles 2

Advertise under the article