ಎಸ್‌ಐಆರ್ ಕುರಿತು ಡಿಸಿ ಸ್ವರೂಪ ಜೊತೆ ಸಂವಾದ: ಸನ್ಮತಿ ಪತ್ರಿಕೆಯ ಸಂಚಿಕೆ ಬಿಡುಗಡೆ
ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ(ಎಸ್‌ಐಆರ್) ಗೆ ಸಂಬಂಧಿಸಿ ಆ.5ರಂದು ಕರಡು ಪಟ್ಟಿಯನ್ನು ಪ್ರಕಟಿಸಲಾಗುವುದು. ಇದರಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಮಾತ್ರ ಸಂಬಂಧಪಟ್ಟ 11 ದಾಖಲೆಗಳಲ್ಲಿ ಒಂದನ್ನು ಸಲ್ಲಿಸಬೇಕೆ ಹೊರತು ಹೆಸರು ಇದ್ದವರು ಯಾವುದೇ ದಾಖಲೆಗಳನ್ನು ಸಲ್ಲಿಸಬೇಕಾದ ಅಗತ್ಯ ಇರುವುದಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ತಿಳಿಸಿದ್ದಾರೆ.
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಪತ್ರಿಕಾ ಭವನ ಸಮಿತಿಯ ಸಹಯೋಗದೊಂದಿಗೆ ಉಡುಪಿ ಪತ್ರಿಕಾ ಭವನದಲ್ಲಿ ಶುಕ್ರವಾರ ಆಯೋಜಿಸಲಾದ ಎಸ್‌ಐಆರ್ (ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ) ಕುರಿತು ತಿಂಗಳ ಅಂಗಳ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಮನೆಮನೆಗೆ ಭೇಟಿ ನೀಡಿ ಫಾರ್ಮ್ ನೀಡಲು ಮತ್ತು ಸಂಗ್ರಹಿಸುವಂತೆ ಬಿಎಲ್‌ಓಗಳಿಗೆ ಹಲವು ಬಾರಿ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ನಿಧಾನಗತಿಯಲ್ಲಿ ಕಾರ್ಯನಿರ್ವಹಿಸಿದ ಬಿಎಲ್‌ಓಗಳಿಗೆ ಈಗಾಗಲೇ ನೋಟೀಸ್ ಜಾರಿ ಮಾಡಲಾಗಿದೆ. ಸರಿಯಾಗಿ ಕರ್ತವ್ಯ ನಿರ್ವಹಿಸದ ಬಿಎಲ್‌ಓಗಳ ಬಗ್ಗೆ ಗಮನಕ್ಕೆ ತಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.
ಫಾರ್ಮ್ ಸಲ್ಲಿಸಿಯೂ ಕರಡು ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿದ್ದರೆ ಅವರು ತಮ್ಮಲ್ಲಿರುವ ಇನ್ನೊಂದು ಪ್ರತಿಯೊಂದಿಗೆ ಅರ್ಜಿ ಸಲ್ಲಿಸಬಹುದು. ಹೆಸರಿನಲ್ಲಿ ವ್ಯಾತ್ಯಾಸ ಇದ್ದವರಿಗೆ ನಾವೇ ನೋಟೀಸ್ ನೀಡುತ್ತೇವೆ. ಅವರು ತಮ್ಮ ಪ್ರಸ್ತುತ ಹೆಸರು ಬದಲಾಗಿರುವುದಕ್ಕೆ ಸಂಬಂಧಿಸಿ ದಾಖಲೆಯನ್ನು ಸಲ್ಲಿಸಬೇಕು. ಕರಡು ಪಟ್ಟಿಯಲ್ಲಿ ಇದ್ದವರ ಹೆಸರು ಯಾವುದೇ ಕಾರಣಕ್ಕೂ ಅಂತಿಮ ಪಟ್ಟಿಯಲ್ಲಿ ಬಿಟ್ಟು ಹೋಗುವುದಿಲ್ಲ. ಅ.7ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.
ಫಾರ್ಮ್‌ಗೆ ಸಂಬಂಧಿಸಿ ಗೊಂದಲದಲ್ಲಿ ನಿವಾರಿಸಲು ಹಾಗೂ ಸಹಾಯ ಮಾಡಲು ತಾಲೂಕು ಮಟ್ಟದಲ್ಲಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಬೂತ್‌ನಲ್ಲಿಯೇ ಸ್ವಯಂ ಸೇವಕರನ್ನು ನೇಮಿಸಲಾಗಿದೆ. ಇವರು ರವಿವಾರ ಕೂಡ ಕಾರ್ಯ ನಿರ್ವಹಿಸುತ್ತಾರೆ. ಬಿಎಲ್‌ಓಗಳ ಬಗ್ಗೆ ದೂರುಗಳಿದ್ದರೆ ಸೆಕ್ಟರ್ ಅಧಿಕಾರಿಗಳು ಅಥವಾ ತಹಶೀಲ್ದಾರ್‌ಗೆ ದೂರವಾಣಿ ಕರೆ ಮಾಡಿ ಕೂಡ ತಿಳಿಸಬಹುದು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಂಘದ ‘ಸನ್ಮತಿ’ ಪತ್ರಿಕೆಯ ಜೂನ್ ತಿಂಗಳ ಸಂಚಿಕೆ ಬಿಡುಗಡೆಗೊಳಿಸಿದರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ.ಕುರ್ಯ ವಹಿಸಿದ್ದರು. ವಾರ್ತಾಧಿಕಾರಿ ಮಂಜುನಾಥ್, ಸಂಘದ ಜಿಲ್ಲಾ ಕೋಶಾಧಿಕಾರಿ ಹರೀಶ್ ಕುಂದರ್, ಪತ್ರಿಕಾ ಭವನ ಸಮಿತಿಯ ಸಹಸಂಚಾಲಕ ಗಣೇಶ್ ಕಲ್ಯಾಣಪುರ ಉಪಸ್ಥಿತರಿದ್ದರು.
ಜಿಲ್ಲಾ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಸ್ವಾಗತಿಸಿದರು. ರಾಜ್ಯ ಸಮಿತಿ ಸದಸ್ಯ ಆಸ್ಟ್ರೋ ಮೋಹನ್ ವಂದಿಸಿದರು. ಪತ್ರಕರ್ತ ರಹೀಂ ಉಜಿರೆ ಕಾರ್ಯಕ್ರಮ ನಿರೂಪಿಸಿದರು.

