ಮಳೆಗಾಲದ ತುರ್ತು ಕೆಲಸಗಳಿಗೆ ಇಲಾಖೆಗಳು ಸಮನ್ವಯತೆಯೊಂದಿಗೆ ತಕ್ಷಣ ಸ್ಪಂದಿಸಿ: ಅಧಿಕಾರಿಗಳಿಗೆ ಶಾಸಕ ಯಶ್ಪಾಲ್ ಸುವರ್ಣ ಸೂಚನೆ
ಮಳೆಗಾಲದ ಅವಘಡಗಳನ್ನು ತುರ್ತಾಗಿ ನಿಭಾಯಿಸಲು ನಗರ ಸಭೆ, ಮೆಸ್ಕಾಂ, ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆಗಳನ್ನು ಒಳಗೊಂಡ ಸದೃಢ ಕಾರ್ಯಪಡೆ ಸಮನ್ವಯತೆಯ ಮೂಲಕ ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಪಂದಿಸುವಂತೆ ಶಾಸಕ ಯಶ್ ಪಾಲ್ ಸುವರ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಉಡುಪಿ ನಗರಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು 24/7 ಕಂಟ್ರೋಲ್ ರೂಮನ್ನು ನಗರಸಭೆಯಲ್ಲಿ ಸ್ಥಾಪಿಸಿ, ಸಂಪರ್ಕ ಸಂಖ್ಯೆಯನ್ನು ಮಾಧ್ಯಮಗಳಲ್ಲಿ ಪ್ರಕಟಿಸುವಂತೆ ಸೂಚಿಸಿದರು.
ನೀರು, ಗ್ಯಾಸ್ ಪೈಪ್ ಲೈನ್ ಹಾಗೂ ಕೇಬಲ್ ಅಳವಡಿಕೆಗಾಗಿ ರಸ್ತೆ ಬದಿಗಳಲ್ಲಿ ಅಗೆತ ಮಾಡಿ ಹಾಗೆ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಹಲವು ಬಾರಿ ತಿಳಿಸಿದ್ದಾಗಿಯೂ ಕ್ರಮ ಕೈಗೊಳ್ಳದೆ ಇರುವುದರಿಂದಾಗಿ ಕೂಡಲೇ ಸಂಬಂಧಪಟ್ಟವರ ಮೇಲೆ ನಗರಸಭೆ ವತಿಯಿಂದ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.
ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ, ವಿದ್ಯುತ್ ವ್ಯತ್ಯಯಗಳನ್ನು ಗಮದಲ್ಲಿರಿಸಿ, ನಿರಂತರ ಕುಡಿಯುವ ನೀರು ಪೂರೈಕೆಗೆ ತಯಾರಿ ನಡೆಸಲು ಸೂಚಿಸಿದರು ಕುಡಿಯುವ ನೀರು ವಿಭಾಗದ ಅಧಿಕಾರಿಗಳಿಗೆ ಹೇಳಿದರು.
ಮಣಿಪಾಲ-ಪೆರಂಪಳ್ಳಿ-ಅಂಬಾಗಿಲು ರಸ್ತೆಯಲ್ಲಿ, ರಸ್ತೆ ಅಗಲೀಕರಣಕ್ಕಾಗಿ ಭೂಮಿ ಬಿಟ್ಟುಕೊಟ್ಟವರಿಗೆ ಟಿ.ಡಿ.ಆರ್. ಮಾದರಿಯಲ್ಲಿ ಸವಲತ್ತು ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ, ನಗರಸಭೆ ವತಿಯಿಂದ ಈವರೆಗೆ ಟಿ.ಡಿ.ಆರ್. ಕುರಿತು ಪ್ರಸ್ತಾವನೆ ಸಲ್ಲಿಸಿರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದರು. ಈ ಬಗ್ಗೆ ರಸ್ತೆ ಅಗಲೀಕರಣಕ್ಕೆ ಜಮೀನು ನೀಡಿದ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.
ಸರಳಬೆಟ್ಟಿನ ಬಬ್ಬು ಸ್ವಾಮಿ ಲೇಔಟ್ ನಲ್ಲಿ ಸರಕಾರಿ ವಸತಿ ಸಮುಚ್ಚಯ ನಿರ್ಮಾಣದ ಸಂದರ್ಭದಲ್ಲಿ ನಿಯಮಾವಳಿಗಳನ್ನು ಮೀರಿ ಮೂಲಭೂತ ಸೌಲಭ್ಯಗಳಾದ ರಸ್ತೆ ಈ.ಟಿ.ಪಿ., ಚರಂಡಿ, ದಾರಿದೀಪ ಹಾಗೂ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ ನಿವಾಸಿಗಳು ಸಮಸ್ಯೆ ಎದುರಿಸುವಂತಾಗಿದೆ. ಈಗಾಗಲೇ ಈ ಬಗ್ಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ 7 ಕೋಟಿ ವೆಚ್ಚದಲ್ಲಿ ಅಗತ್ಯ ಕಾಮಗಾರಿಗಳಿಗೆ ಅನುದಾನ ಮಂಜೂರು ಮಾಡಲಾಗಿದ್ದು, ಜನಸಾಮಾನ್ಯರು ಮನೆ ನಿರ್ಮಾಣಕ್ಕೆ ಹಲವಾರು ಷರತ್ತುಗಳನ್ನು ಹಾಕುವ ನಗರಸಭೆ ಸರ್ಕಾರಿ ವಸತಿ ಸಮುಚ್ಚಯ ನಿರ್ಮಿಸುವ ಸಂದರ್ಭದಲ್ಲಿ ನಿಯಮಗಳನ್ನು ಮೀರಿದ ಪರಿಣಾಮ ಇಂದು ಜನರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಸನ್ನಿವೇಶ ನಿರ್ಮಾಣವಾಗಿದೆ ಎಂದರು.
ಸಭೆಯಲ್ಲಿ ಉಡುಪಿ ನಗರಸಭೆ ಪೌರಾಯುಕ್ತರಾದ ಮಹಾಂತೇಶ ಹಂಗರಗಿ, ನಗರಸಭೆ ಮಾಜಿ ಅಧ್ಯಕ್ಷರಾದ ಪ್ರಭಾಕರ ಪೂಜಾರಿ, ಕಿರಣ್ ಕುಮಾರ್ ಬೈಲೂರು, ಸುಮಿತ್ರಾ ನಾಯಕ್, ಮಾಜಿ ನಗರಸಭಾ ಸದಸ್ಯರಾದ ಗಿರಿಧರ ಆಚಾರ್ಯ, ಬಾಲಕೃಷ್ಣ ಶೆಟ್ಟಿ, ಹರೀಶ್ ಶೆಟ್ಟಿ, ಗಿರೀಶ್ ಅಂಚನ್, ವಿಜಯ ಕೊಡವೂರು, ಕಲ್ಪನಾ ಸುಧಾಮ, ಅನಿಟ ಡಿಸೋಜ, ಭಾರತಿ ಪ್ರಶಾಂತ್, ಅರಣ್ಯ, ಅಗ್ನಿಶಾಮಕ, ಮೆಸ್ಕಾಂ ಇಲಾಖೆಯ ಅಧಿಕಾರಿಗಳು ಹಾಗೂ ಉಡುಪಿ ನಗರಸಭೆಯ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.
