ಅಪ್ರಾಪ್ತ ಬಾಲಕನ ಅಪಹರಣ ಪ್ರಕರಣ: ಆರೋಪಿಗಳ ಬಂಧನ
ಅಪ್ರಾಪ್ತ ಬಾಲಕನನ್ನು ಅಪಹರಿಸಿ ಕೇರಳದ ವುಡ್ ಕಂಪನಿಯಲ್ಲಿ ಬಲವಂತವಾಗಿ ಕೆಲಸಕ್ಕೆ ಸೇರಿಸಿ, ಹಲ್ಲೆ ಹಾಗೂ ಜೀವ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಟಪಾಡಿ ನಿವಾಸಿ ಸುಚಿತ್ ನಾಯಕ್ ಹಾಗೂ ವಾರಂಬಳ್ಳಿ ನಿವಾಸಿ ವಿಖ್ಯಾತ್ ಆಚಾರ್ಯ ಎಂದು ಗುರುತಿಸಲಾಗಿದೆ.
ಮಟಪಾಡಿ ಗ್ರಾಮದ ತಾರೇಶ್ (38) ಅವರ ಪುತ್ರ ಬ್ರಹ್ಮಾವರ ಸರ್ಕಾರಿ ಬೋರ್ಡ್ ಹೈಸ್ಕೂಲ್‌ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಜೂನ್ 1ರಂದು ಬೆಳಿಗ್ಗೆ ಸುಮಾರು 8.30ಕ್ಕೆ ಬ್ರಹ್ಮಾವರ ಬಸ್ ನಿಲ್ದಾಣದಿಂದ ಆರೋಪಿಗಳು ಬಾಲಕನನ್ನು ಅಪಹರಿಸಿ ಕೇರಳ ರಾಜ್ಯದ ತಲಪಾಡಿ ಸಮೀಪದ ಕುಂಜತ್ತೂರು ಪದವು ಪ್ರದೇಶದಲ್ಲಿರುವ ವುಡ್ ಕಂಪನಿಗೆ ಕರೆದೊಯ್ದು ಬಲವಂತವಾಗಿ ಕೆಲಸಕ್ಕೆ ಸೇರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಜೂನ್ 9ರಂದು ಬಾಲಕ ಮನೆಗೆ ಹೋಗುವುದಾಗಿ ತಿಳಿಸಿದ ವೇಳೆ, ತಾವು ವಾಸವಿದ್ದ ಕೊಠಡಿಯಲ್ಲಿ ಆರೋಪಿ ಸುಚಿತ್ ನಾಯಕ್ ವೈರ್‌ನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಮತ್ತೋರ್ವ ಆರೋಪಿ ವಿಖ್ಯಾತ್ ಆಚಾರ್ಯ ಚೂರಿ ತೋರಿಸಿ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಲಾಗಿದ್ದು, ಈ ಘಟನೆಯನ್ನು ಮುಸ್ತಾಕ್ ಎಂಬಾತ ತನ್ನ ಮೊಬೈಲ್‌ನಲ್ಲಿ ವಿಡಿಯೊ ಚಿತ್ರೀಕರಿಸಿದ್ದಾನೆ ಎಂದು ತಿಳಿಸಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಪ್ರಕರಣದ ಮೂರನೇ ಆರೋಪಿ ಬಾಲಾಪರಾಧಿಯಾಗಿರುವುದರಿಂದ ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗಿದೆ. ಪ್ರಕರಣದ ಕುರಿತು ಬ್ರಹ್ಮಾವರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.