ತುಳುನಾಡಿಗೆ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಕೊಡುಗೆ ಅಪಾರ: ಬಿ. ಜಯಕರ ಶೆಟ್ಟಿ ಇಂದ್ರಾಳಿ
ರೇಡಿಯೋ ಮಣಿಪಾಲ ಸಮುದಾಯ ಬಾನುಲಿ ಕೇಂದ್ರ ಹಾಗೂ ತುಳುಕೂಟ ಉಡುಪಿ ಸಹಯೋಗದಲ್ಲಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರ ನೆನಪಿನಲ್ಲಿ "ಕಿನ್ಯ ಜೋಕ್ಲೆಡ್ದ್ ಸೊರ ಸಂಪು" ಕಾರ್ಯಕ್ರಮವು ಉಡುಪಿಯ ಮುಕುಂದ ಕೃಪಾ ಶಾಲೆಯಲ್ಲಿ ನಡೆಯಿತು.
ತುಳು ಭಾಷೆಯ ಉಳಿವು ಹಾಗೂ ಶಾಲಾ ಮಕ್ಕಳಲ್ಲಿ ತುಳು ಭಾಷೆ-ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಉಡುಪಿಯ ವಿವಿಧ ಶಾಲೆಗಳಲ್ಲಿ ಹಮ್ಮಿಕೊಳ್ಳುವ ಯೋಜನೆಯನ್ನು ತುಳುಕೂಟ ಉಡುಪಿ ಮತ್ತು ರೇಡಿಯೋ ಮಣಿಪಾಲ ರೂಪಿಸಿಕೊಂಡಿದ್ದು, ಅದರ ಅಂಗವಾಗಿ ಮುಕುಂದ ಕೃಪಾ ಶಾಲೆಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ತುಳುಕೂಟ ಉಡುಪಿಯ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಅವರು ನಾಡೋಜ ಕಯ್ಯಾರ ಕಿಞ್ಞಣ್ಣ ರೈ ರಚಿಸಿದ ಪದ್ಯವನ್ನು ಹಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, "ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಅವರು ತುಳುನಾಡಿಗೆ ನೀಡಿರುವ ಕೊಡುಗೆ ಅಪಾರವಾಗಿದೆ. ಮಹಾಕವಿ, ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿ ನಾಯಕರಾಗಿ ಅವರು ಸಲ್ಲಿಸಿದ ಸೇವೆ ಅನನ್ಯ. ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ ಕಾರ್ಯನಿರ್ವಹಿಸಿದ್ದ ಅವರು ಕನ್ನಡ ಮತ್ತು ತುಳು ಭಾಷೆಗಳ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಇಂತಹ ಮಹನೀಯರನ್ನು ಈ ನಾಡಿನ ಜನತೆ ಎಂದಿಗೂ ಮರೆಯಬಾರದು" ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತುಳುಕೂಟದ ಉಪಾಧ್ಯಕ್ಷ ಹಾಗೂ ಕಯ್ಯಾರ ಕಿಞ್ಞಣ್ಣ ರೈ ಅವರ ಅಳಿಯ ಭುವನ ಪ್ರಸಾದ್ ಹೆಗ್ಡೆ, ತುಳುಕೂಟದ ಗೌರವ ಸಲಹೆಗಾರ ವಿಶ್ವನಾಥ ಶೆಣೈ, ರೇಡಿಯೋ ಮಣಿಪಾಲದ ಕಾರ್ಯಕ್ರಮ ಸಂಯೋಜಕಿ ಡಾ. ರಶ್ಮಿ ಅಮ್ಮೆಂಬಳ ಹಾಗೂ ಮುಕುಂದ ಕೃಪಾ ಶಾಲೆಯ ಪ್ರಾಂಶುಪಾಲೆ ವಿನುತಾ ಎಸ್. ನಾಯಕ್ ಅವರು ಮಾತನಾಡಿದರು.
ಕಾರ್ಯಕ್ರಮದ ಸಂಚಾಲಕಿ ವಿದ್ಯಾ ಸರಸ್ವತಿ ಪ್ರಾಸ್ತಾವಿಕವಾಗಿ ಮಾತನಾಡಿ, ತುಳು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗಾಗಿ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು, ಈ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ತುಳುಕೂಟದ ಕಾರ್ಯಕಾರಿ ಸಮಿತಿ ಸದಸ್ಯೆ ಪ್ರಭಾವತಿ ವಿಶ್ವನಾಥ್ ಸ್ವಾಗತಿಸಿದರು. ಕಾರ್ಯದರ್ಶಿ ಗಂಗಾಧರ ಕಿದಿಯೂರು ವಂದಿಸಿದರು. ಯಶೋದಾ ಕೇಶವ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ತುಳು ಕಥೆ, ಗಾದೆ, ಕವಿತೆ ಹಾಗೂ ಪದ್ಯಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆ ಗಳಿಸಿದರು.