ಯಶ್ಪಾಲ್ ಸುವರ್ಣರನ್ನು ಶೀಘ್ರ ಬಂಧಿಸಬೇಕು: ಪ್ರಸಾದ್ ರಾಜ್ ಕಾಂಚನ್ ಆಗ್ರಹ
ದೇಶದಲ್ಲಿ ಗಲಭೆಗೆ ಪ್ರಚೋದನೆ ನೀಡುವಂತಹ ಹೇಳಿಕೆ ನೀಡಿರುವ ಶಾಸಕ ಯಶ್ಪಾಲ್ ಸುವರ್ಣ ಅವರನ್ನು ತಕ್ಷಣ ಬಂಧಿಸಬೇಕು ಎಂದು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ಆಗ್ರಹಿಸಿದ್ದಾರೆ.
ಉಡುಪಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯ ಶಾಂತಿ ಮತ್ತು ಸೌಹಾರ್ದಕ್ಕೆ ಧಕ್ಕೆಯಾಗುವಂತಹ ಹೇಳಿಕೆಗಳು ಯಾವುದೇ ಕಾರಣಕ್ಕೂ ಸಮರ್ಥನೀಯವಲ್ಲ ಎಂದು ಹೇಳಿದರು.
ಜನಪ್ರತಿನಿಧಿಯಾದವರು ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಬೇಕಾದ ಹೊಣೆಗಾರಿಕೆ ಹೊಂದಿರುತ್ತಾರೆ. ಆದರೆ ಶಾಸಕ ಯಶ್ಪಾಲ್ ಸುವರ್ಣ ಅವರು ಜನರ ನಡುವೆ ಘರ್ಷಣೆ ಉಂಟುಮಾಡುವ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಇಂತಹ ನಡೆಗಳನ್ನು ಜಿಲ್ಲೆಯ ಜನರು ಎಂದಿಗೂ ಕ್ಷಮಿಸುವುದಿಲ್ಲ. ಮುಂದಿನ ದಿನಗಳಲ್ಲಿ ಜನರೇ ಅವರಿಗೆ ತಕ್ಕ ಉತ್ತರ ನೀಡಲಿದ್ದು, ಪ್ರಜಾಪ್ರಭುತ್ವದ ಮೂಲಕ ಸೂಕ್ತ ಪಾಠ ಕಲಿಸಲಿದ್ದಾರೆ ಎಂದು ಪ್ರಸಾದ್ ರಾಜ್ ಕಾಂಚನ್ ಹೇಳಿದರು.
ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಪ್ರಕಾರ ತ್ವರಿತ ಕ್ರಮ ಕೈಗೊಂಡು, ಶಾಂತಿ ಕದಡುವಂತಹ ಹೇಳಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಜಯಪ್ರಕಾಶ್ ಹೆಗ್ಡೆ, ಪ್ರಸಾದ್ ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಜ್ಯೋತಿ ಹೆಬ್ಬಾರ್, ರಮೇಶ್ ಕಾಂಚನ್, ಪ್ರಶಾಂತ್ ಜತ್ತನ್ ಹಾಗೂ ಹರೀಶ್ ಕಿಣಿ ಅಲೆವೂರು ಉಪಸ್ಥಿತರಿದ್ದರು.