"ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ" ರಾಷ್ಟ್ರದ ಭದ್ರತೆಗೆ ಮಾರಕ: ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ
Saturday, July 11, 2026
ರಾಜ್ಯ ಸರ್ಕಾರ ಹೊರಡಿಸಿರುವ "ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ" ಅಧಿಸೂಚನೆ ಸಂವಿಧಾನದ ಚೌಕಟ್ಟಿಗೆ ವಿರುದ್ಧವಾಗಿದ್ದು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಾಧ್ಯತೆ ಇದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಆರೋಪಿಸಿದ್ದಾರೆ.
ಉಡುಪಿಯ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಷಯದಲ್ಲಿ ಕೇಂದ್ರ ಗೃಹ ಸಚಿವಾಲಯ ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದರು. ಭಾರತದ ಸಂವಿಧಾನವು ದೇಶದ ಎಲ್ಲಾ ನಾಗರಿಕರಿಗೆ ಒಂದೇ ಪೌರತ್ವದ ತತ್ವವನ್ನು ಕಲ್ಪಿಸಿದ್ದು, ರಾಜ್ಯ ಸರ್ಕಾರವು "ಶಾಶ್ವತ ನಿವಾಸ ಪ್ರಮಾಣಪತ್ರ" ನೀಡುವ ಮೂಲಕ ಪ್ರತ್ಯೇಕ ವರ್ಗವನ್ನು ಸೃಷ್ಟಿಸಲು ಮುಂದಾಗಿದೆ ಎಂದು ಅವರು ಹೇಳಿದರು.
ಯಾವುದೇ ಸಾಂವಿಧಾನಿಕ ಅಥವಾ ಶಾಸನಬದ್ಧ ಅಧಿಕಾರವಿಲ್ಲದೆ "ಶಾಶ್ವತ ನಿವಾಸಿಗಳು" ಎಂಬ ಪ್ರತ್ಯೇಕ ವರ್ಗವನ್ನು ರಚಿಸುವುದು ಸಂವಿಧಾನದ 14ನೇ ವಿಧಿಯ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ. ಇಂತಹ ವರ್ಗೀಕರಣವು ಯಾವುದೇ ಕಾನೂನುಬದ್ಧ ಉದ್ದೇಶವನ್ನು ಹೊಂದಿಲ್ಲ ಎಂದು ಅವರು ಆರೋಪಿಸಿದರು. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಈ ಅಧಿಸೂಚನೆ ಆತಂಕಕಾರಿಯಾಗಿದೆ ಎಂದು ಕುತ್ಯಾರು ನವೀನ್ ಶೆಟ್ಟಿ ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಕಾನೂನು ಸಲಹೆಗಾರ ಮಟ್ಟಾರು ರತ್ನಾಕರ ಹೆಗ್ಡೆ, ರಾಜ್ಯ ಸರ್ಕಾರವು "ಕರ್ನಾಟಕ ಶಾಶ್ವತ ನಿವಾಸ ಪ್ರಮಾಣಪತ್ರ" ನೀಡುವ ಮೂಲಕ ಮತದಾರರಲ್ಲದವರಿಗೂ ಪೌರತ್ವ ನೀಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು. ಇದು ಭಾರತದ ಸಂವಿಧಾನಕ್ಕೆ ವಿರುದ್ಧವಾಗಿದ್ದು, ಕಾಂಗ್ರೆಸ್ ಸರ್ಕಾರವು ಮತಬ್ಯಾಂಕ್ ರಾಜಕಾರಣದ ಉದ್ದೇಶದಿಂದ ಈ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಅವರು ಟೀಕಿಸಿದರು. ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು. ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಪ್ರಮುಖರಾದ ಶ್ರೀಕಾಂತ್ ನಾಯಕ್, ಶಿವಕುಮಾರ್, ಮಧುಕರ ಮುದ್ರಾಡಿ ಮೊದಲಾದವರು ಉಪಸ್ಥಿತರಿದ್ದರು.