SAFನ ಕಾನೂನುಬದ್ಧ ಮಾನ್ಯತೆ ಬಹಿರಂಗಪಡಿಸಿ: ಸರ್ಕಾರಕ್ಕೆ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಆಗ್ರಹ
2026ರ ಜೂನ್ ತಿಂಗಳಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಶೇಷ ಕಾರ್ಯಪಡೆ (SAF – Special Action Force)ಯನ್ನು ಮುಂದುವರಿಸಲು ಯಾವ ಕಾನೂನುಬದ್ಧ ಮಾನ್ಯತೆ ಇದೆ ಎಂಬುದನ್ನು ಸರ್ಕಾರ ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಒತ್ತಾಯಿಸಿದ್ದಾರೆ.
ಉಡುಪಿಯಲ್ಲಿ ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ನಕ್ಸಲ್ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿವೆ ಎಂದು ಹೇಳುತ್ತಿರುವ ಸರ್ಕಾರವು ದಕ್ಷಿಣ ಕನ್ನಡ, ಉಡುಪಿ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ Special Action Force (SAF) ಮುಂದುವರಿಕೆಯ ಅಗತ್ಯವೇನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. 2026ರ ಜೂನ್ ತಿಂಗಳಲ್ಲಿ ANF ಸಿಬ್ಬಂದಿಯನ್ನು ಮೊಟಕುಗೊಳಿಸಿ SAF ರಚನೆ ಮಾಡಲಾಗಿದೆ. ಆದರೆ, ಈ ವಿಶೇಷ ಕಾರ್ಯಪಡೆಯನ್ನು ಯಾವ ಕಾನೂನಿನ ಅಡಿಯಲ್ಲಿ ಸ್ಥಾಪಿಸಲಾಗಿದೆ ಎಂಬುದನ್ನು ಸರ್ಕಾರ ಇದುವರೆಗೆ ಬಹಿರಂಗಪಡಿಸಿಲ್ಲ. ಹೀಗಾಗಿ SAFಗೆ ಇರುವ ಕಾನೂನುಬದ್ಧ ಮಾನ್ಯತೆ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸ್ಪಷ್ಟ ಉತ್ತರ ನೀಡಬೇಕು ಎಂದು ಒತ್ತಾಯಿಸಿದರು.
"ಈ ಹಿಂದೆ ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ ಅವರು ಕರಾವಳಿ ಭಾಗದ ಜನರು ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದರು. ಹಾಗಿದ್ದರೆ ಈಗ ಕರಾವಳಿ ಭಾಗಕ್ಕೇ ವಿಶೇಷ ಕಾರ್ಯಪಡೆ ನೀಡಿರುವ ಉದ್ದೇಶವೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ" ಎಂದು ಅವರು ಹೇಳಿದರು. "SAF ರಚನೆಯಾದ ಕೆಲವೇ ದಿನಗಳಲ್ಲಿ ಚಿನ್ನಯ್ಯ ಬುರುಡೆ ಪ್ರಕರಣ ಬೆಳಕಿಗೆ ಬಂದಿತು. ಆ ಪ್ರಕರಣದ ತನಿಖೆಗೆ ಸರ್ಕಾರ Special Investigation Team (SIT) ರಚಿಸಿತು. ಆದರೆ, SAF ಅನ್ನು ಯಾವ ಉದ್ದೇಶಕ್ಕಾಗಿ ರಚಿಸಲಾಗಿದೆ? ಇದು ಕೇವಲ ಕಾನೂನು-ಸುವ್ಯವಸ್ಥೆ ಕಾಪಾಡಲು ಸ್ಥಾಪಿತವಾದ ಪಡೆಯೇ, ಅಥವಾ ಬೇರೆ ಕಾರಣಗಳಿವೆಯೇ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು" ಎಂದು ಪ್ರಶ್ನಿಸಿದರು.
ಚಿನ್ನಯ್ಯ ಬುರುಡೆ ಪ್ರಕರಣದ ನಂತರ ಪರಿಸ್ಥಿತಿ ಬದಲಾಗಿದೆ. ಹಾಗಿದ್ದರೂ ಕರಾವಳಿ ಭಾಗದಲ್ಲಿ SAF ಅನ್ನು ಮುಂದುವರಿಸಿರುವ ಅಗತ್ಯ ಏನು? ಬುರುಡೆ ಗ್ಯಾಂಗ್ ಗೆ ಭದ್ರತೆ ಒದಗಿಸಲೆಂದೇ ಈ ಪಡೆಯನ್ನು ಸ್ಥಾಪಿಸಿದೆಯೇ ಎಂದು ಪ್ರಶ್ನಿಸಿದರು. ಸಾರ್ವಜನಿಕರ ತೆರಿಗೆ ಹಣದಿಂದ ಈ ವಿಶೇಷ ಪಡೆಯನ್ನು ನಿರ್ವಹಿಸಲಾಗುತ್ತಿದೆ. ಅದರ ಅಗತ್ಯವೇ ಇಲ್ಲದಿದ್ದರೆ, SAF ಅನ್ನು ವಿಸರ್ಜಿಸಿ ಆ ವೆಚ್ಚವನ್ನು ಜನರ ಅಭಿವೃದ್ಧಿ ಹಾಗೂ ಗ್ಯಾರಂಟಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಬಳಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
SAF ರಚನೆಗೆ ಇರುವ ಕಾನೂನುಬದ್ಧ ಆಧಾರವನ್ನು ಸರ್ಕಾರ ಸಾರ್ವಜನಿಕವಾಗಿ ತಿಳಿಸಬೇಕು. ಇಲ್ಲವಾದರೆ ಈ ಪಡೆಯ ರಚನೆ ಕುರಿತು ಮೂಡಿರುವ ಅನುಮಾನಗಳಿಗೆ ಸರ್ಕಾರವೇ ಉತ್ತರಿಸಬೇಕಾಗುತ್ತದೆ ಎಂದು ಅನುಪಮಾ ಶೆಣೈ ಹೇಳಿದರು.