ಕೊಡಚಾದ್ರಿ ಬೆಟ್ಟದಲ್ಲಿ 60 ಅಡಿ ಆಳಕ್ಕೆ ಬಿದ್ದ ಪ್ರವಾಸಿಗನ ರಕ್ಷಣೆ
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೊಡಚಾದ್ರಿ ಬೆಟ್ಟದಲ್ಲಿ ತಲೆಸುತ್ತಿನಿಂದ ಆಯತಪ್ಪಿ ಸುಮಾರು 60 ಅಡಿ ಆಳಕ್ಕೆ ಬಿದ್ದ ಪ್ರವಾಸಿಗನನ್ನು ಸ್ಥಳೀಯ ಜೀಪ್ ಚಾಲಕರು ಸಾಹಸಮಯ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ನಡೆದಿದೆ.
ರಕ್ಷಿಸಲ್ಪಟ್ಟ ಪ್ರವಾಸಿಗನನ್ನು ಕುಮಟಾ ಮೂಲದ ಪ್ರದೀಪ್ ಎಂದು ಗುರುತಿಸಲಾಗಿದೆ. ಕೊಡಚಾದ್ರಿ ಬೆಟ್ಟಕ್ಕೆ ಪ್ರವಾಸಕ್ಕೆ ಬಂದಿದ್ದ ಪ್ರದೀಪ್ ಅವರು ಶಂಕರಾಚಾರ್ಯ ಪೀಠದ ಸಮೀಪ ತೆರಳುತ್ತಿದ್ದ ವೇಳೆ ಏಕಾಏಕಿ ತಲೆಸುತ್ತು ಕಾಣಿಸಿಕೊಂಡು ಆಯತಪ್ಪಿ ಬೆಟ್ಟದ ಕೆಳಭಾಗಕ್ಕೆ ಸುಮಾರು 60 ಅಡಿ ಆಳಕ್ಕೆ ಬಿದ್ದಿದ್ದಾರೆ.
ಘಟನೆಯನ್ನು ಗಮನಿಸಿದ ಇತರ ಪ್ರವಾಸಿಗರು ತಕ್ಷಣ ಪೊಲೀಸರಿಗೆ ಹಾಗೂ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಕೊಲ್ಲೂರು, ನಿಟ್ಟೂರು ಹಾಗೂ ಸಂಪೆಕಟ್ಟೆ ಭಾಗದ ಪ್ರವಾಸಿ ಜೀಪ್ ಚಾಲಕರು ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಕೂಡಲೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದ್ದಾರೆ.
ಕಠಿಣ ಹಾಗೂ ಅಪಾಯಕಾರಿ ಬೆಟ್ಟ ಪ್ರದೇಶದಲ್ಲೂ ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸಿದ ಜೀಪ್ ಚಾಲಕರು, ಸುಮಾರು 60 ಅಡಿ ಕೆಳಗೆ ಬಿದ್ದಿದ್ದ ಪ್ರದೀಪ್ ಅವರನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.
ಬಳಿಕ ಗಾಯಗೊಂಡ ಪ್ರದೀಪ್ ಅವರನ್ನು ನಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅವರ ತಲೆ, ಕೈ ಹಾಗೂ ಕಾಲು ಭಾಗಕ್ಕೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಾಯಕಾರಿ ಪ್ರದೇಶದಲ್ಲಿ ಸಮಯಪ್ರಜ್ಞೆ ಹಾಗೂ ಧೈರ್ಯದಿಂದ ಕಾರ್ಯಾಚರಣೆ ನಡೆಸಿ ಪ್ರವಾಸಿಗನ ಜೀವ ಉಳಿಸಿದ ಸ್ಥಳೀಯ ಜೀಪ್ ಚಾಲಕರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.