-->
 ಕುಕ್ಕೆ ಕ್ಷೇತ್ರದ ಹೆಸರಿನಲ್ಲಿ ಆನ್‌ಲೈನ್ ವಂಚನೆಗೆ ಯತ್ನ: ಪೊಲೀಸರಿಗೆ ದೂರು

ಕುಕ್ಕೆ ಕ್ಷೇತ್ರದ ಹೆಸರಿನಲ್ಲಿ ಆನ್‌ಲೈನ್ ವಂಚನೆಗೆ ಯತ್ನ: ಪೊಲೀಸರಿಗೆ ದೂರು


ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಭಕ್ತರಿಂದ ಹಣ ಪಡೆಯಲು ಯತ್ನಿಸಿರುವ ಆರೋಪದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಪೊಲೀಸರಿಗೆ ದೂರು ನೀಡಿದೆ.

ದೇವಸ್ಥಾನದ ಹೆಸರಿನಲ್ಲಿ ನಕಲಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ಗಮನಕ್ಕೆ ಬಂದ ಹಿನ್ನೆಲೆಯಲ್ಲಿ, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರು ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೇವಸ್ಥಾನದ ಹೆಸರನ್ನು ಬಳಸಿಕೊಂಡು ವಂಚನೆಗೆ ಯತ್ನಿಸಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ದೇಶ-ವಿದೇಶಗಳಲ್ಲಿ ಅಪಾರ ಭಕ್ತರನ್ನು ಹೊಂದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಹೆಸರಿನಲ್ಲಿ ಈ ಹಿಂದೆಯೂ ಸಾಮಾಜಿಕ ಜಾಲತಾಣಗಳ ಮೂಲಕ ವಂಚನೆಗೆ ಯತ್ನಿಸಿರುವ ಘಟನೆಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ನಕಲಿ ಜಾಹೀರಾತು, ವಿಡಿಯೋ ಹಾಗೂ ಅನುಮಾನಾಸ್ಪದ ಆನ್‌ಲೈನ್ ಲಿಂಕ್‌ಗಳಿಗೆ ಭಕ್ತರು ಮರುಳಾಗದಂತೆ ದೇವಸ್ಥಾನದ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

ದೇವಸ್ಥಾನದ ಅಧಿಕೃತ ಮೂಲಗಳಿಂದ ಮಾಹಿತಿ ಖಚಿತಪಡಿಸಿಕೊಳ್ಳದೆ ಯಾವುದೇ ಅಪರಿಚಿತ ಮೊಬೈಲ್ ಸಂಖ್ಯೆಗೆ, ಸಾಮಾಜಿಕ ಜಾಲತಾಣದ ಲಿಂಕ್ ಮೂಲಕ ಅಥವಾ ಅಪರಿಚಿತ ಬ್ಯಾಂಕ್ ಖಾತೆಗೆ ಹಣ ವರ್ಗಾಯಿಸಬಾರದು ಎಂದು ಸೂಚಿಸಲಾಗಿದೆ.

ಈ ಹಿಂದೆ ಕುಕ್ಕೆ ಸುಬ್ರಹ್ಮಣ್ಯ ದೇವರ ಫೋಟೋ ಹಾಗೂ ಸ್ಥಳೀಯ ವಸತಿಗೃಹದ ಮಾಹಿತಿಯನ್ನು ದುರ್ಬಳಕೆ ಮಾಡಿಕೊಂಡು ಭಕ್ತರನ್ನು ವಂಚಿಸಿರುವ ಆರೋಪದ ಮೇಲೂ ದೂರು ದಾಖಲಾಗಿತ್ತು. ಭಕ್ತರೊಬ್ಬರು ಆನ್‌ಲೈನ್‌ನಲ್ಲಿ ಕೊಠಡಿ ಬುಕ್ಕಿಂಗ್ ಮಾಡಿದ್ದು, ಹಣ ಪಾವತಿಸಿದ ಬಳಿಕ ‘ಅನಘ ಗೆಸ್ಟ್ ಹೌಸ್, ನಿಯರ್ ಆದಿ ಸುಬ್ರಹ್ಮಣ್ಯ ಟೆಂಪಲ್’ ಎಂಬ ವಿವರ ಹಾಗೂ ಕುಕ್ಕೆ ಸುಬ್ರಹ್ಮಣ್ಯ ದೇವರ ಫೋಟೋ ಹೊಂದಿರುವ ಬಿಲ್‌ವೊಂದನ್ನು ವಂಚಕರು ಕಳುಹಿಸಿದ್ದರು. ಬಳಿಕ ನೈಜ ವಸತಿಗೃಹದಲ್ಲಿ ವಿಚಾರಿಸಿದಾಗ ಯಾವುದೇ ಕೊಠಡಿ ಬುಕ್ಕಿಂಗ್ ಆಗಿಲ್ಲ ಎಂಬುದು ತಿಳಿದುಬಂದಿತ್ತು.

ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ವಸತಿಗೃಹದ ಅಧಿಕೃತ ಸಂಪರ್ಕ ಸಂಖ್ಯೆಯ ಮೂಲಕ ನೇರವಾಗಿ ಸಂಪರ್ಕಿಸಿ ಕೊಠಡಿ ಲಭ್ಯತೆ ಹಾಗೂ ಬುಕ್ಕಿಂಗ್ ಖಚಿತಪಡಿಸಿಕೊಂಡ ಬಳಿಕವೇ ಹಣ ಪಾವತಿಸುವಂತೆ ಮನವಿ ಮಾಡಲಾಗಿದೆ.

ಅನುಮಾನಾಸ್ಪದ ವೆಬ್‌ಸೈಟ್, ಲಿಂಕ್ ಅಥವಾ ಆನ್‌ಲೈನ್ ವಂಚನೆಗೆ ಒಳಗಾದಲ್ಲಿ ತಕ್ಷಣವೇ ಸಂಬಂಧಪಟ್ಟ ಬ್ಯಾಂಕ್‌ಗೆ ಮಾಹಿತಿ ನೀಡುವುದರ ಜೊತೆಗೆ ಸೈಬರ್ ಕ್ರೈಂ ವಿಭಾಗ ಅಥವಾ ಪೊಲೀಸರಿಗೆ ದೂರು ನೀಡುವಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ.

Ads on article

Advertise in articles 1

advertising articles 2

Advertise under the article