-->
ರಾಮ ಮಂದಿರ ದೇಣಿಗೆ ಸಂಗ್ರಹದ ಲೆಕ್ಕವನ್ನು ಬಹಿರಂಗಪಡಿಸಿ: ಸುರೇಶ್ ಶೆಟ್ಟಿ ಬನ್ನಂಜೆ

ರಾಮ ಮಂದಿರ ದೇಣಿಗೆ ಸಂಗ್ರಹದ ಲೆಕ್ಕವನ್ನು ಬಹಿರಂಗಪಡಿಸಿ: ಸುರೇಶ್ ಶೆಟ್ಟಿ ಬನ್ನಂಜೆ


ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಹಲವು ವರ್ಷಗಳಿಂದ ಸಂಗ್ರಹಿಸಲಾದ ದೇಣಿಗೆಯ ಸಂಪೂರ್ಣ ಲೆಕ್ಕವನ್ನು ದೇಶದ ಜನತೆಗೆ ಬಹಿರಂಗಪಡಿಸಬೇಕು ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಅಧ್ಯಕ್ಷ ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹಿಸಿದ್ದಾರೆ.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ಸಂಘಟನೆಗಳು 1989ರಿಂದಲೂ ಶ್ರೀರಾಮನ ಹೆಸರನ್ನು ರಾಜಕೀಯವಾಗಿ ಬಳಸಿಕೊಂಡು ಅಧಿಕಾರಕ್ಕೆ ಬರಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ದೇಶದಾದ್ಯಂತ ಮನೆಮನೆಗೆ ತೆರಳಿ ರಾಮ ಮಂದಿರ ನಿರ್ಮಾಣದ ಹೆಸರಿನಲ್ಲಿ ಇಟ್ಟಿಗೆ ಹಾಗೂ ವಿವಿಧ ರೂಪಗಳಲ್ಲಿ ದೇಣಿಗೆ ಸಂಗ್ರಹಿಸಲಾಗಿತ್ತು. ಈ ದೇಣಿಗೆಗಳ ಮೊತ್ತ ಮತ್ತು ಅದರ ಬಳಕೆಯ ಸಂಪೂರ್ಣ ವಿವರವನ್ನು ಸಾರ್ವಜನಿಕರಿಗೆ ತಿಳಿಸುವ ಜವಾಬ್ದಾರಿ ಸಂಬಂಧಪಟ್ಟವರ ಮೇಲಿದೆ ಎಂದು ಅವರು ಹೇಳಿದರು.

ರಾಮ ಮಂದಿರ ನಿರ್ಮಾಣದ ವಿಚಾರದಲ್ಲಿ ಜನರಲ್ಲಿ ಭಾವನಾತ್ಮಕ ವಾತಾವರಣ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲಾಗಿದೆ ಎಂದು ಆರೋಪಿಸಿದ ಸುರೇಶ್ ಶೆಟ್ಟಿ ಬನ್ನಂಜೆ, ದೇವರ ಹೆಸರಿನಲ್ಲಿ ಮತಯಾಚನೆ ಮಾಡುವುದನ್ನು ಬಿಟ್ಟು, ಸರ್ಕಾರಗಳು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಬರಬೇಕು ಎಂದು ಹೇಳಿದರು.

ಅಯೋಧ್ಯೆ ಶ್ರೀರಾಮ ಮಂದಿರದ ಮಂತ್ರಾಕ್ಷತೆ ಎಂಬ ಹೆಸರಿನಲ್ಲಿ ರಾಜ್ಯ ಸರ್ಕಾರದ ಉಚಿತ ಅಕ್ಕಿಗೆ ಅರಿಶಿನ ಬೆರೆಸಿ ಮನೆಮನೆಗೆ ವಿತರಿಸಿ ಜನರಿಂದ ದೇಣಿಗೆ ಸಂಗ್ರಹಿಸಲಾಗಿದೆ ಎಂಬ ಆರೋಪಗಳ ಬಗ್ಗೆಯೂ ಅವರು ಪ್ರಶ್ನೆಗಳನ್ನು ಎತ್ತಿದರು. ಈ ರೀತಿಯ ದೇಣಿಗೆ ಸಂಗ್ರಹ ನಡೆದಿದ್ದರೆ ಅದರ ಸಂಪೂರ್ಣ ಲೆಕ್ಕಪತ್ರವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

“ಎಷ್ಟು ವರ್ಷಗಳಿಂದ ದೇಣಿಗೆ ಸಂಗ್ರಹಿಸಲಾಗಿದೆ? ಎಷ್ಟು ಮೊತ್ತ ಸಂಗ್ರಹವಾಗಿದೆ? ಆ ಹಣವನ್ನು ಯಾವ ರೀತಿಯಲ್ಲಿ ಬಳಸಲಾಗಿದೆ? ಎಂಬುದನ್ನು ದೇಶದ ಜನರಿಗೆ ಸ್ಪಷ್ಟಪಡಿಸಬೇಕು” ಎಂದು ಸುರೇಶ್ ಶೆಟ್ಟಿ ಬನ್ನಂಜೆ ಆಗ್ರಹಿಸಿದರು.

ಧರ್ಮ ಮತ್ತು ಹಿಂದುತ್ವದ ಹೆಸರಿನಲ್ಲಿ ಜನರ ಭಾವನೆಗಳನ್ನು ಬಳಸಿಕೊಂಡು ಚುನಾವಣಾ ರಾಜಕೀಯ ನಡೆಸುವ ದಿನಗಳು ಮುಂದಿನ ದಿನಗಳಲ್ಲಿ ಇರುವುದಿಲ್ಲ. ಜನರು ಅಭಿವೃದ್ಧಿ ಮತ್ತು ಜನಪರ ಆಡಳಿತದ ಆಧಾರದ ಮೇಲೆ ತೀರ್ಪು ನೀಡಲಿದ್ದಾರೆ ಎಂದು ಅವರು ಹೇಳಿದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ವಿರುದ್ಧ ತಾವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ದಾಖಲೆಗಳು ಮತ್ತು ಲೆಕ್ಕಪತ್ರಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.

Ads on article

Advertise in articles 1

advertising articles 2

Advertise under the article