‘ಅಮ್ಮನ ಸವಿ ನೆನಪು’ ಗಡಿನಾಡ ಧೀರೆ ಪ್ರೇಮ ಭಟ್ ಸ್ಮರಣೆ: ‘ನಾದ ನಮನ’ ಸಂಗೀತ ಕಛೇರಿ
ತಮ್ಮ 27ನೇ ವಯಸ್ಸಿನಲ್ಲೇ ಪತಿಯನ್ನು ಕಳೆದುಕೊಂಡು, ನಾಲ್ವರು ಮಕ್ಕಳನ್ನು ಏಕಾಂಗಿಯಾಗಿ ಸಾಕಿ-ಸಲಹಿ, ಶಿಕ್ಷಣ, ಕೃಷಿ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ವಿಶಿಷ್ಟ ಸಾಧನೆ ಮಾಡಿದ ಕಾಸರಗೋಡು ಮೀಯಪದವಿನ ‘ಗಡಿನಾಡ ಧೀರೆ’ ಪ್ರೇಮ ಕೆ. ಭಟ್ ಅವರ ಜೀವನ ಮತ್ತು ಮೌಲ್ಯಗಳು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಿವೆ ಎಂದು ಹಿರಿಯ ರಂಗಕರ್ಮಿ, ನಟ ಹಾಗೂ ನಿರ್ದೇಶಕ ಕಾಸರಗೋಡು ಚಿನ್ನಾ ಹೇಳಿದರು.
ಮಣಿಪಾಲದ ಸರಿಗಮಭಾರತಿ ಸಂಗೀತ ವಿದ್ಯಾಲಯದ ವತಿಯಿಂದ ಆಯೋಜಿಸಲಾಗಿದ್ದ ‘ಅಮ್ಮನ ಸವಿ ನೆನಪು’ ಕಾರ್ಯಕ್ರಮದಲ್ಲಿ ಪ್ರೇಮ ಕೆ. ಭಟ್ ಅವರ ಜೀವನ ಮತ್ತು ಸಾಧನೆಗಳನ್ನು ಸ್ಮರಿಸಿ ಅವರು ಮಾತನಾಡಿದರು.
“ಪ್ರೇಮ ಕೆ. ಭಟ್ ಅವರು ಬದುಕಿದ ರೀತಿ, ಅನುಸರಿಸಿದ ಮೌಲ್ಯಗಳು ಹಾಗೂ ಸಮಾಜಮುಖಿ ಕಾರ್ಯಗಳು ಅವರ ನಿಧನದ ನಂತರವೂ ಅವರ ಬದುಕನ್ನು ಜನಮನದಲ್ಲಿ ಜೀವಂತವಾಗಿರಿಸಿವೆ. ತಮ್ಮ ಎಳೆಯ ಮಕ್ಕಳೊಂದಿಗೆ ಏಕಾಂಗಿಯಾಗಿ ಬದುಕನ್ನು ಕಟ್ಟಿಕೊಂಡ ಅವರು, ಊರಿನಲ್ಲಿ ಶಾಲೆಗಳ ನಿರ್ಮಾಣ ಹಾಗೂ ಬೆಳವಣಿಗೆಗೆ ಅಪಾರ ಶ್ರಮ ವಹಿಸಿದರು. ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿಸುವುದರ ಜೊತೆಗೆ ಅನೇಕ ಮಂದಿಗೆ ವಿದ್ಯಾದಾನ ಮಾಡಿ ಮಾದರಿಯಾದರು. ಉತ್ತಮ ಕೃಷಿಕೆಯಾಗಿಯೂ, ಧಾರ್ಮಿಕ ಮುಖಂಡೆಯಾಗಿಯೂ ಸಮಾಜಕ್ಕೆ ಮಾರ್ಗದರ್ಶನ ನೀಡಿದ ಅವರು ‘ಗಡಿನಾಡ ಧೀರೆ’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದು, ಕಾಸರಗೋಡಿನ ಹೆಮ್ಮೆಯಾಗಿದ್ದಾರೆ” ಎಂದು ಕಾಸರಗೋಡು ಚಿನ್ನಾ ಹೇಳಿದರು.
ಕಾರ್ಯಕ್ರಮದ ಆರಂಭದಲ್ಲಿ ಪ್ರೇಮ ಕೆ. ಭಟ್ ಅವರ ಪುತ್ರಿ ಹಾಗೂ ಕವಯಿತ್ರಿ ಪ್ರಮೀಳಾ ಚುಳ್ಳಿಕ್ಕಾನ ಅವರ ಕವನಗಳನ್ನು ಉಡುಪಿಯ ವಿದುಷಿ ಸಂಗೀತಾ ಬಾಲಚಂದ್ರ ಅವರು ಭಾವಪೂರ್ಣವಾಗಿ ಹಾಡಿದರು. ಬಳಿಕ ಪ್ರಮೀಳಾ ಚುಳ್ಳಿಕ್ಕಾನ್ ಅವರು ತಾಯಿಯ ನೆನಪಿನಲ್ಲಿ ಆಶುಕವಿತೆ ವಾಚಿಸಿ ಸಭಿಕರ ಮನಸ್ಸನ್ನು ಸ್ಪರ್ಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ಜಯಪ್ರಕಾಶ್ ನಾರಾಯಣ ವಹಿಸಿದ್ದರು. ವಿದುಷಿ ಉಮಾಶಂಕರಿ ಸ್ವಾಗತಿಸಿದರು. ಡಾ. ಎಚ್. ಎನ್. ಉದಯಶಂಕರ್ ವಂದನಾರ್ಪಣೆಗೈದರು. ಜಿ.ಪಿ. ಪ್ರಭಾಕರ್ ಹಾಗೂ ಶಿಲ್ಪ ಜೋಷಿ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಬೆಂಗಳೂರಿನ ವಿದುಷಿ ಚಾರುಲತಾ ರಾಮಾನುಜಂ ಅವರಿಂದ ‘ನಾದ ನಮನ’ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಅವರಿಗೆ ವಿದುಷಿ ಸಿಂಧು ಸುಚೇತನ್ ವಯೋಲಿನ್‌ನಲ್ಲಿ ಹಾಗೂ ವಿದ್ವಾನ್ ಅರ್ಜುನ ಕುಮಾರ್ ಮೃದಂಗದಲ್ಲಿ ಸೊಗಸಾಗಿ ಸಹಕರಿಸಿದರು.

