-->
ಸಾವಿನಲ್ಲೂ ಸಾರ್ಥಕತೆ ಮೆರೆದ ಮಣಿಪಾಲದ ಪ್ರಣವ್ ಹೆಗ್ಡೆ: ಅಂಗಾಂಗ ದಾನಕ್ಕೆ ಕುಟುಂಬಿಕರ ನಿರ್ಧಾರ

ಸಾವಿನಲ್ಲೂ ಸಾರ್ಥಕತೆ ಮೆರೆದ ಮಣಿಪಾಲದ ಪ್ರಣವ್ ಹೆಗ್ಡೆ: ಅಂಗಾಂಗ ದಾನಕ್ಕೆ ಕುಟುಂಬಿಕರ ನಿರ್ಧಾರ


ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಡುಪಿ ಜಿಲ್ಲೆಯ ಮಣಿಪಾಲದ 41 ವರ್ಷದ ಪ್ರಣವ್ ಹೆಗ್ಡೆ ಅವರು ಮೆದುಳು ನಿಷ್ಕ್ರಿಯಗೊಂಡ ಬಳಿಕ, ಅವರ ಕುಟುಂಬವು ಅಂಗಾಂಗ ದಾನಕ್ಕೆ ಸಮ್ಮತಿ ನೀಡುವ ಮೂಲಕ ಹಲವಾರು ರೋಗಿಗಳಿಗೆ ಹೊಸ ಬದುಕಿನ ಭರವಸೆ ನೀಡಿದೆ.

ಪ್ರಣವ್ ಹೆಗ್ಡೆ ಅವರನ್ನು ಆಗಸ್ಟ್ 17ರಂದು ಗಂಭೀರ ಆರೋಗ್ಯ ಸ್ಥಿತಿಯಲ್ಲಿ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸತತ ಪ್ರಯತ್ನದ ನಡುವೆಯೂ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿಲ್ಲ. ಬಳಿಕ ಅವರನ್ನು ಮೆದುಳು ನಿಷ್ಕ್ರಿಯ (ಬ್ರೈನ್ ಡೆಡ್) ಎಂದು ಘೋಷಿಸಲಾಯಿತು. ಮಾನವ ಅಂಗಾಂಗ ಕಸಿ ಕಾಯಿದೆ, 1994ರ ನಿಯಮಾನುಸಾರ, ಅಧಿಕೃತ ತಜ್ಞ ವೈದ್ಯರ ತಂಡ ಎರಡು ಬಾರಿ ಪರೀಕ್ಷೆ ನಡೆಸಿ ಮೆದುಳು ನಿಷ್ಕ್ರಿಯತೆಯನ್ನು ದೃಢಪಡಿಸಿತು.

ಈ ಸಂದರ್ಭದಲ್ಲಿ ಕುಟುಂಬದವರು ಸ್ವಯಂಪ್ರೇರಿತವಾಗಿ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು. ಆಪ್ತರನ್ನು ಕಳೆದುಕೊಂಡ ದುಃಖದ ನಡುವೆಯೂ, ಇತರರ ಜೀವ ಉಳಿಸಲು ಕುಟುಂಬ ಕೈಗೊಂಡ ನಿರ್ಧಾರ  ಮಾನವೀಯತೆಗೆ ಸಾಕ್ಷಿಯಾಗಿದೆ.

ಜೀವಸಾರ್ಥಕತೆ ಹಾಗೂ ರಾಜ್ಯ ಅಂಗಾಂಗ ಮತ್ತು ಅಂಗಾಂಶ ಕಸಿ ಸಂಸ್ಥೆ (SOTTO), ಬೆಂಗಳೂರು ಇವರ ಸಮನ್ವಯದಲ್ಲಿ ಅಂಗಾಂಗಗಳನ್ನು ಅಗತ್ಯವಿರುವ ರೋಗಿಗಳಿಗೆ ಹಂಚಿಕೆ ಮಾಡಲಾಯಿತು. ಯಕೃತ್ ಮತ್ತು ಒಂದು ಮೂತ್ರಪಿಂಡವನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಕಳುಹಿಸಲಾಯಿತು. ಕಾರ್ನಿಯಾಗಳನ್ನು ಅತ್ತಾವರದ ಕೆ.ಎಂ.ಸಿ.ಗೆ ಕಳುಹಿಸಲಾಯಿತು. ಕಸಿಗಾಗಿ ಕಾಯುತ್ತಿದ್ದ ನೋಂದಾಯಿತ ರೋಗಿಯೊಬ್ಬರಿಗೆ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮತ್ತೊಂದು ಮೂತ್ರಪಿಂಡವನ್ನು ಕಸಿ ಮಾಡಲು ಉಳಿಸಿಕೊಳ್ಳಲಾಯಿತು.

ಮಾಹೆ ಟೀಚಿಂಗ್ ಆಸ್ಪತ್ರೆಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುಧಾಕರ್ ಕಂಟಿಪುಡಿ ಹಾಗೂ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಅವರು ಪ್ರಣವ್ ಹೆಗ್ಡೆ ಅವರ ಕುಟುಂಬದ ನಿರ್ಧಾರವನ್ನು ಶ್ಲಾಘಿಸಿದರು. “ಅಂಗಾಂಗ ದಾನವು ಒಬ್ಬ ವ್ಯಕ್ತಿ ಮತ್ತೊಬ್ಬರಿಗೆ ನೀಡಬಹುದಾದ ಅತ್ಯಂತ ದೊಡ್ಡ ಕೊಡುಗೆಯಾಗಿದೆ. ಆಪ್ತರನ್ನು ಕಳೆದುಕೊಂಡ ನೋವಿನ ನಡುವೆಯೂ ಪ್ರಣವ್ ಹೆಗ್ಡೆ ಅವರ ಕುಟುಂಬ ಇತರರಿಗೆ ಜೀವ ನೀಡುವ ನಿರ್ಧಾರ ಕೈಗೊಂಡಿರುವುದು ಅಪಾರ ಧೈರ್ಯ ಮತ್ತು ಮಾನವೀಯತೆಯ ಸಂಕೇತ. ಈ ಶ್ರೇಷ್ಠ ಕಾರ್ಯಕ್ಕಾಗಿ ಕುಟುಂಬಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇವೆ,” ಎಂದು ಅವರು ತಿಳಿಸಿದ್ದಾರೆ.


 

Ads on article

Advertise in articles 1

advertising articles 2

Advertise under the article