-->
ಕೋಟ್ಯಂತರ ರೂ. ಖರ್ಚಾದರೂ ಕೊಳಚೆ ನೀರಿಗೆ ಮುಕ್ತಿ ಇಲ್ಲ: ರಾಜಕಾಲುವೆಯಲ್ಲೇ ಹರಿಯುತ್ತಿದೆ ಚರಂಡಿ ನೀರು

ಕೋಟ್ಯಂತರ ರೂ. ಖರ್ಚಾದರೂ ಕೊಳಚೆ ನೀರಿಗೆ ಮುಕ್ತಿ ಇಲ್ಲ: ರಾಜಕಾಲುವೆಯಲ್ಲೇ ಹರಿಯುತ್ತಿದೆ ಚರಂಡಿ ನೀರು


ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಒಳಚರಂಡಿ ಪೈಪ್‌ಗಳ ಕಾಮಗಾರಿ ನಡೆಸಲಾಗಿದೆ. ಹೊಸ ಪೈಪ್‌ಗಳ ಅಳವಡಿಕೆಯನ್ನೂ ಮಾಡಲಾಗಿದೆ. ಇಷ್ಟೆಲ್ಲಾ ಕಾಮಗಾರಿ ನಡೆದರೂ, ಹಲವು ಪ್ರದೇಶಗಳಲ್ಲಿ ಒಳಚರಂಡಿಯ ಕೊಳಚೆ ನೀರು ರಸ್ತೆ ಹಾಗೂ ರಾಜಕಾಲುವೆಗಳಿಗೆ ಹರಿಯುತ್ತಿದೆ. ಈ ಬಗ್ಗೆ ನಗರಸಭೆಯ ಗಮನಕ್ಕೆ ಬಂದರೂ ಕಣ್ಮುಚ್ಚಿ ಕುಳಿತಿದೆ ಎನ್ನುವ ಆರೋಪ ವ್ಯಕ್ತವಾಗಿದೆ.


ಕಳೆದ ಐದು ವರ್ಷಗಳಿಂದ ಉಡುಪಿ ನಗರಸಭೆಯಲ್ಲಿ ಬಿಜೆಪಿ ಆಡಳಿತ ನಡೆಸಿದ್ದು, ಈ ಅವಧಿಯಲ್ಲಿ ಒಳಚರಂಡಿ ವ್ಯವಸ್ಥೆಗಾಗಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಕಾಮಗಾರಿಗಳು ಸಮರ್ಪಕವಾಗಿ ಪೂರ್ಣಗೊಂಡಿಲ್ಲ. ಹೊಸ ಪೈಪ್‌ಗಳನ್ನು ಅಳವಡಿಸಿದ ಬಳಿಕವೂ ಒಳಚರಂಡಿ ನೀರು ರಸ್ತೆ ಹಾಗೂ ರಾಜಕಾಲುವೆಯಲ್ಲಿ ಹರಿಯುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಸಮರ್ಪಕ ನಿರ್ವಹಣೆಯ ಕೊರತೆಯೇ ಪ್ರಮುಖ ಕಾರಣ ಎಂದು ಉಡುಪಿ ಬ್ಲಾಕ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಹಾಗೂ ಉಡುಪಿ ನಗರಸಭೆಯ ನಾಮನಿರ್ದೇಶಿತ ಸದಸ್ಯ ಸುರೇಶ್ ಶೆಟ್ಟಿ ಬನ್ನಂಜೆ ಆರೋಪಿಸಿದ್ದಾರೆ.

ಮೂಡನಿಡಂಬೂರು ಪ್ರದೇಶದಲ್ಲಿ ಶೇಖರ್ ಪೂಜಾರಿ ಅವರ ಮನೆಯ ಮುಂಭಾಗದ ದೊಡ್ಡ ತೋಡಿನ ಸಮೀಪವಿರುವ ಡ್ರೈನೇಜ್ ಚೇಂಬರ್‌ನಿಂದ ಕೊಳಚೆ ನೀರು ದೊಡ್ಡ ತೋಡಿಗೆ ಹರಿಯುತ್ತಿದೆ. ಅದೇ ರೀತಿ ಧೂಮವತಿ ರಸ್ತೆಯಲ್ಲಿರುವ ಆಟೋ ಚಾಲಕ ಚಂದ್ರಶೇಖರ್ ಅವರ ಮನೆಯ ಮುಂಭಾಗದ ತೋಡಿನಲ್ಲಿಯೂ ಒಳಚರಂಡಿಯ ಕೊಳಚೆ ನೀರು ಹರಿಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ಸಿರಿಬೀಡು ವಾರ್ಡ್, ಬನ್ನಂಜೆ ರಾಜಕಾಲುವೆ ಸೇರಿದಂತೆ ನಗರದ ಹಲವು ಕಡೆಗಳಲ್ಲಿ ಒಳಚರಂಡಿಯ ದುರ್ವಾಸನೆಯ ನೀರು ಹರಿಯುತ್ತಿದ್ದು, ಸ್ಥಳೀಯ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿಯೂ ಎದುರಾಗಿದೆ. ಈಗಾಗಲೇ ಹಲವು ಮನೆಗಳಲ್ಲಿ ಡೆಂಗ್ಯೂ ಜ್ವರ ಕಾಣಿಸಿಕೊಂಡಿರುವುದರಿಂದ ಜನರ ಆತಂಕ ಹೆಚ್ಚಾಗಿದೆ ಎಂದು ಸುರೇಶ್ ಶೆಟ್ಟಿ ಬನ್ನಂಜೆ ಹೇಳಿದ್ದಾರೆ.

ಒಳಚರಂಡಿ ವ್ಯವಸ್ಥೆಗಾಗಿ ಮೀಸಲಿಟ್ಟ ಕೋಟ್ಯಂತರ ರೂಪಾಯಿ ಹಣದಲ್ಲಿ ಸಮರ್ಪಕ ಕಾಮಗಾರಿ ನಡೆದಿಲ್ಲ ಎಂಬ ಆರೋಪ ಮಾಡಿರುವ ಅವರು, “ನಗರಸಭೆಯಿಂದ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿರುವ ಕೋಟ್ಯಂತರ ರೂಪಾಯಿ ಹಣದ ಬಳಕೆಯ ಬಗ್ಗೆ ಮಾಜಿ ನಗರಸಭಾ ಅಧ್ಯಕ್ಷರು ಹಾಗೂ ಹಿಂದಿನ ಆಡಳಿತದ ಸದಸ್ಯರು ಜನರಿಗೆ ಸ್ಪಷ್ಟ ಉತ್ತರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

ನಗರಸಭೆಯ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ನಡೆದಿರುವ ಒಳಚರಂಡಿ ಕಾಮಗಾರಿಗಳ ಗುಣಮಟ್ಟ, ವೆಚ್ಚ ಹಾಗೂ ಹಣದ ಬಳಕೆಯ ಕುರಿತು ಸಮಗ್ರ ಪರಿಶೀಲನೆ ನಡೆಸಬೇಕು. ಸಾರ್ವಜನಿಕ ಹಣ ದುರ್ಬಳಕೆಯಾಗಿದೆಯೇ ಎಂಬುದರ ಬಗ್ಗೆಯೂ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜಕಾಲುವೆಗೆ ಒಳಚರಂಡಿ ನೀರು ಹರಿಯುವುದನ್ನು ತಕ್ಷಣವೇ ತಡೆಗಟ್ಟಬೇಕು. ಸಮಸ್ಯೆ ಮುಂದುವರಿದರೆ ಉಡುಪಿ ನಗರಸಭೆಯ ಕಚೇರಿ ಎದುರು ಕುಳಿತು ಪ್ರತಿಭಟನೆ ನಡೆಸಲಾಗುವುದು ಎಂದು ಸುರೇಶ್ ಶೆಟ್ಟಿ ಬನ್ನಂಜೆ ಎಚ್ಚರಿಕೆ ನೀಡಿದ್ದಾರೆ.

ನಗರಸಭೆಯ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಒಳಚರಂಡಿ ಸೋರಿಕೆಯ ಮೂಲ ಪತ್ತೆಹಚ್ಚಿ ಶಾಶ್ವತ ಪರಿಹಾರ ಕಲ್ಪಿಸಬೇಕು. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ರಾಜಕಾಲುವೆ ಹಾಗೂ ರಸ್ತೆಗೆ ಹರಿಯುತ್ತಿರುವ ಕೊಳಚೆ ನೀರನ್ನು ತಡೆಗಟ್ಟಲು ತುರ್ತು ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ. 





Ads on article

Advertise in articles 1

advertising articles 2

Advertise under the article