ಉಡುಪಿಯ ಪೋದಾರ್ ಶಾಲೆಯಲ್ಲಿ "ಆಟಿದ ಲೇಸ್"
ಜಾಗತೀಕರಣದ ಪ್ರಭಾವದಿಂದ ಸ್ಥಳೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳು ಮರೆಯಾಗುತ್ತಿರುವ ಇಂದಿನ ಸಂದರ್ಭದಲ್ಲಿ, ಹೊಸ ತಲೆಮಾರಿಗೆ ತುಳುನಾಡಿನ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಉಡುಪಿಯ ಪೋದಾರ್ ಅಂತರಾಷ್ಟ್ರೀಯ ಶಾಲೆಯಲ್ಲಿ 'ಆಟಿ ಲೇಸ್' ಕಾರ್ಯಕ್ರಮ ಆಯೋಜಿಸಲಾಯಿತು.
ಆಟಿ ತಿಂಗಳು ತುಳುನಾಡಿನ ಜನಜೀವನ, ಕೃಷಿ, ಪ್ರಕೃತಿ ಮತ್ತು ಜನಪದ ನಂಬಿಕೆಗಳೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಶಾಲೆಯು ವಿದ್ಯಾರ್ಥಿಗಳಿಗೆ ಆಟಿಯ ಸಾಂಸ್ಕೃತಿಕ ಮಹತ್ವವನ್ನು ಪರಿಚಯಿಸುವ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಶಾಲಾ ಪ್ರಾಂಶುಪಾಲೆ ನೇತ್ರಾ ಹೆಚ್. ತೆಂಗಿನ ಸಿರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ವಿದ್ಯಾರ್ಥಿಗಳು ಸಾಂಪ್ರದಾಯಿಕ ಉಡುಗೆ ತೊಟ್ಟು ಹಾಡು, ನೃತ್ಯ ಹಾಗೂ ಜನಪದ ಪ್ರದರ್ಶನಗಳ ಮೂಲಕ ತುಳುನಾಡಿನ ಸೊಗಡನ್ನು ಅನಾವರಣಗೊಳಿಸಿದರು. ಆಟಿ ತಿಂಗಳ ಆಚರಣೆ, ಅದರ ಹಿನ್ನೆಲೆ, ಜನಪದ ಪದ್ಧತಿಗಳು ಹಾಗೂ ಆಹಾರ ಸಂಸ್ಕೃತಿಯ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ಪ್ರಶ್ನೋತ್ತರ, ಭಾಷಣ ಹಾಗೂ ಸಾಂಪ್ರದಾಯಿಕ ಆಹಾರಗಳ ಪರಿಚಯ ಕಾರ್ಯಕ್ರಮಕ್ಕೆ ಇನ್ನಷ್ಟು ವಿಶೇಷ ಮೆರುಗು ನೀಡಿತು.
ಕಾರ್ಯಕ್ರಮದ ಮತ್ತೊಂದು ವಿಶೇಷ ಆಕರ್ಷಣೆಯಾಗಿ ವಿದ್ಯಾರ್ಥಿಗಳ ಪೋಷಕರು ಪ್ರೀತಿಯಿಂದ ತಯಾರಿಸಿ ಕಳುಹಿಸಿದ್ದ ಆಟಿಯ ವಿಶೇಷ ತಿನಿಸುಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾದವು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಪರಸ್ಪರ ಆಹಾರ ಹಂಚಿಕೊಂಡು ಸವಿಯುವ ಮೂಲಕ ಹಬ್ಬದ ಸಂಭ್ರಮವನ್ನು ಅನುಭವಿಸಿದರು. ಈ ಮೂಲಕ ಆಹಾರವೂ ಸಂಸ್ಕೃತಿಯ ಪ್ರಮುಖ ಭಾಗ ಎಂಬ ಸಂದೇಶ ಮಕ್ಕಳಿಗೆ ತಲುಪಿತು.
ಇಂತಹ ಕಾರ್ಯಕ್ರಮಗಳು ಪಠ್ಯಪುಸ್ತಕದ ಜ್ಞಾನಕ್ಕಷ್ಟೇ ಸೀಮಿತವಾಗದೆ, ಮಕ್ಕಳಲ್ಲಿ ಸ್ಥಳೀಯ ಸಂಸ್ಕೃತಿಯ ಬಗ್ಗೆ ಗೌರವ, ಪರಂಪರೆಯ ಅರಿವು ಹಾಗೂ ಸಾಮಾಜಿಕ ಒಗ್ಗಟ್ಟಿನ ಮೌಲ್ಯಗಳನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಆಧುನಿಕ ಶಿಕ್ಷಣದೊಂದಿಗೆ ಸ್ಥಳೀಯ ಸಂಸ್ಕೃತಿಯ ಸಂರಕ್ಷಣೆಯೂ ಸಮಾನವಾಗಿ ಅಗತ್ಯ ಎಂಬುದನ್ನು 'ಆಟಿಯ ಲೇಸು' ಕಾರ್ಯಕ್ರಮ ಮತ್ತೊಮ್ಮೆ ಸಾಬೀತುಪಡಿಸಿತು.
ಕಾರ್ಯಕ್ರಮದ ನಿರೂಪಣೆಯನ್ನು ಆರ್ಯ ಪೈ, ಪ್ರೇಕ್ಷನ್ ಹಾಗೂ ಆರ್ಯಹಿ ದೇವಾಡಿಗ ನಡೆಸಿದರು. ನಿಷ್ಮಾ ಸ್ವಾಗತಿಸಿದರು. ಪರೀಕ್ಷಿತ್ ವಂದನಾರ್ಪಣೆ ಸಲ್ಲಿಸಿದರು. ಪೋದಾರ್ ಪ್ರೆಪ್ ಮುಖ್ಯ ಶಿಕ್ಷಕಿ ಗೀತಾ ಲವೀನ್ ಪೂಜಾರಿ, ಶಾಲೆಯ ಆಡಳಿತಾಧಿಕಾರಿ ಹರೀಶ್ ನಾಯಕ್, ವಿದ್ಯಾರ್ಥಿಗಳು, ಶಿಕ್ಷಕ ಮತ್ತು ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು.

