ವಿದ್ಯುತ್ ಶಾರ್ಟ್ ಸರ್ಕ್ಯೂಟ್: ದಿನಸಿ ಅಂಗಡಿ ಭಸ್ಮ: ಲಕ್ಷಾಂತರ ರೂ. ನಷ್ಟ
Tuesday, August 04, 2026
ಕುಂದಾಪುರ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿರುವ ಶ್ರೀ ಬ್ರಹ್ಮಸ್ಥಾನ ದೇವಸ್ಥಾನದ ಸಮೀಪದ ಗುರು ಬ್ರಹ್ಮ ಜನರಲ್ ಸ್ಟೋರ್ ಸೋಮವಾರ ತಡರಾತ್ರಿ ಅಗ್ನಿ ಸಂಭವಿಸಿದೆ. ಅವಘಡದಲ್ಲಿ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ನಷ್ಟವಾಗಿರುವುದಾಗಿ ತಿಳಿದುಬಂದಿದೆ.
ಅಂಗಡಿ ಮಾಲೀಕ ಸಂತೋಷ್ ಅವರು ಎಂದಿನಂತೆ ವ್ಯಾಪಾರ ಮುಗಿಸಿ ಅಂಗಡಿಯನ್ನು ಮುಚ್ಚಿ ಮನೆಗೆ ತೆರಳಿದ ಬಳಿಕ ತಡರಾತ್ರಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿ ಇಡೀ ಅಂಗಡಿಗೆ ವ್ಯಾಪಿಸಿ, ಅಂಗಡಿಯಲ್ಲಿದ್ದ ದಿನಸಿ ಸಾಮಗ್ರಿಗಳು, ಫ್ರಿಡ್ಜ್ ಹಾಗೂ ಪೀಠೋಪಕರಣಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಅಂಗಡಿಯಲ್ಲಿದ್ದ ಫ್ರಿಡ್ಜ್‌ನಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿರಬಹುದೆಂದು ಶಂಕಿಸಲಾಗಿದೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಅಗ್ನಿಶಾಮಕ ಠಾಣಾಧಿಕಾರಿ ವಿ. ಸುಂದರ್, ಸಹಾಯಕ ಠಾಣಾಧಿಕಾರಿ ಖ್ವಾಜಾ ಹುಸೇನ್, ಪ್ರಮುಖ ಅಗ್ನಿಶಾಮಕ ಸತೀಶ್ ಶೆಣೈ, ಚಾಲಕ ಬಸವರಾಜ ಹಾಗೂ ಅಗ್ನಿಶಾಮಕರಾದ ಅಭಿಷೇಕ್ ಮತ್ತು ರಿಯಾಝ್ ಪಾಟೀಲ್ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.