ಬೈಂದೂರಿನಲ್ಲಿ ಅಕ್ರಮ ಕೆಂಪುಕಲ್ಲು ಗಣಿಗಾರಿಕೆ: 16 ಲಕ್ಷ ಮೌಲ್ಯದ ಸೊತ್ತು ವಶ
Thursday, September 24, 2026
ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬ್ಯಾಟಿಯಾಣಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕೆಂಪುಕಲ್ಲು ಗಣಿಗಾರಿಕೆ ನಡೆಸುತ್ತಿದ್ದ ಸ್ಥಳಕ್ಕೆ ಬೈಂದೂರು ಪೊಲೀಸರು ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿ, ಸುಮಾರು 16 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾಲ್ತೋಡು ಬೀಟ್ ಅಧಿಕಾರಿಯಿಂದ ಬಂದ ಮಾಹಿತಿ ಆಧರಿಸಿ ಸೆ.23ರಂದು ಮಧ್ಯಾಹ್ನ 1.15ಕ್ಕೆ ಬೈಂದೂರು ಠಾಣೆಯ ಪಿಎಸ್‌ಐ ಸುನಿಲ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಸಲಾಯಿತು.
ಈ ವೇಳೆ ಗಣಿಗಾರಿಕೆ ಸ್ಥಳದಲ್ಲಿದ್ದ ಕೆಂಪುಕಲ್ಲು ತುಂಬಿದ ಎರಡು ಟಿಪ್ಪರ್‌ಗಳು, ಬ್ಲೇಡ್ ಅಳವಡಿಸಿರುವ ಎರಡು ಪವರ್ ಟಿಲ್ಲರ್ ಮೆಷಿನ್‌ಗಳು ಹಾಗೂ ಎರಡು ಕಲ್ಲು ಎತ್ತುವ ಟ್ರಾಲಿ ಮೆಷಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಅಂದಾಜು ಮೌಲ್ಯ 16 ಲಕ್ಷ ರೂಪಾಯಿ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರ ಪೂಜಾರಿ ಹಾಗೂ ಸತೀಶ್ ಶೆಟ್ಟಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.


