-->
 ಪಕ್ಷ ನೀಡಿದ ಅವಕಾಶಕ್ಕೆ ಚಿರಋಣಿ- ಕಾರ್ಯಕರ್ತರ ಅಭಿಪ್ರಾಯಕ್ಕೆ ಸ್ಪಂದಿಸಿ ಪಕ್ಷ ಬಲಪಡಿಸುವೆ: ಕಿಶನ್ ಹೆಗ್ಡೆ ಕೊಳ್ಕೆಬೈಲ್

ಪಕ್ಷ ನೀಡಿದ ಅವಕಾಶಕ್ಕೆ ಚಿರಋಣಿ- ಕಾರ್ಯಕರ್ತರ ಅಭಿಪ್ರಾಯಕ್ಕೆ ಸ್ಪಂದಿಸಿ ಪಕ್ಷ ಬಲಪಡಿಸುವೆ: ಕಿಶನ್ ಹೆಗ್ಡೆ ಕೊಳ್ಕೆಬೈಲ್


ಉಡುಪಿ ಜಿಲ್ಲಾ ಕಾಂಗ್ರೆಸ್‌ನ ನೂತನ ಅಧ್ಯಕ್ಷರಾಗಿ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರು ಇಂದು  ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು.


ಉಡುಪಿ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿಕಟಪೂರ್ವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೂತನ ಅಧ್ಯಕ್ಷ ಕೊಳ್ಕೆಬೈಲು ಕಿಶನ್ ಹೆಗ್ಡೆ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಈ ವೇಳೆ ಮಾತನಾಡಿದ ಅಶೋಕ್ ಕುಮಾರ್ ಕೊಡವೂರು ಅವರು, 7 ವರ್ಷ 7 ತಿಂಗಳುಗಳ ತನ್ನ ಅಧಿಕಾರಾವಧಿಯಲ್ಲಿ ಸಹಕರಿಸಿದ ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು. ಅಲ್ಲದೇ ನೂತನ ಅಧ್ಯಕ್ಷರ ಜೊತೆ ತನ್ನ ಸಂಪೂರ್ಣ ಸಹಕಾರದಲ್ಲಿ ಪಕ್ಷ ಸಂಘಟನೆ ಮಾಡಲು ಸಹಕರಿಸುವುದಾಗಿ ಹೇಳಿದರು. 


ನೂತನ ಅಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲ್ ಮಾತನಾಡಿ, ಕಾಂಗ್ರೆಸ್ ಪಕ್ಷ ನೀಡಿದ ಅವಕಾಶ ಹಾಗೂ ಗೌರವವನ್ನು ಎಂದಿಗೂ ಮರೆಯುವುದಿಲ್ಲ. ಮುಂದೆ ತಾನು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಣಯವೂ ಕಾಂಗ್ರೆಸ್ ಅಧ್ಯಕ್ಷನ ನಿರ್ಣಯವಲ್ಲ, ಒಬ್ಬ ಸಾಮಾನ್ಯ ಕಾರ್ಯಕರ್ತನ ನಿರ್ಣಯವಾಗಿರುತ್ತದೆ. ಪಕ್ಷದ ಕಟ್ಟಕಡೆಯ ಕಾರ್ಯಕರ್ತನನ್ನೂ ತಲುಪುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇನೆ. ತಾಳ್ಮೆಯಿಂದ ಕಾದರೆ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಸ್ಥಾನಮಾನ ದೊರೆಯಬಹುದು ಎಂಬುದಕ್ಕೆ ತಾನೇ ಉದಾಹರಣೆ ಎಂದು ಅವರು ಹೇಳಿದರು. ತಮ್ಮ ಮಾತುಗಳು ಹಾಗೂ ವಿಚಾರಗಳು ಏನೇ ಇದ್ದರೂ ಅವುಗಳನ್ನು ವೇದಿಕೆಯಲ್ಲಿ ಹೇಳುವುದಕ್ಕಿಂತ ಕಾರ್ಯಕರ್ತರ ಮನೆ ಬಾಗಿಲಿಗೆ ತೆರಳಿ ಅವರೊಂದಿಗೆ ನೇರವಾಗಿ ಹಂಚಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತೇನೆ. ಪಕ್ಷದ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಅವರ ಅಭಿಪ್ರಾಯಗಳಿಗೆ ಸ್ಪಂದಿಸುವುದು ತನ್ನ ಉದ್ದೇಶವಾಗಿದೆ ಎಂದು ಕಿಶನ್ ಹೆಗ್ಡೆ ಕೊಳ್ಕಬೈಲ್ ತಿಳಿಸಿದರು.


ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಇದು ಅಧಿಕಾರ ಹಸ್ತಾಂತರವಲ್ಲ, ಜವಾಬ್ದಾರಿ ಹಸ್ತಾಂತರ. ಈವರೆಗೆ ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ರಾಷ್ಟ್ರೀಯ ನಾಯಕರು ಅಧಿಕಾರ ನೀಡುತ್ತಿದ್ದರು. ಆದರೆ ಇದೀಗ ಕಾರ್ಯಕರ್ತರ ಅಭಿಪ್ರಾಯ ಪಡೆದು ಆಯ್ಕೆ ಮಾಡಲಾಗಿದೆ. ಪಕ್ಷದ ಯಾವುದೇ ಕಾರ್ಯಕರ್ತನಾಗಿದ್ದರೂ ಯಾವುದೇ ಬೇಧಭಾವ ಮಾಡದೆ ಅವರ ಬೇಡಿಕೆಗಳಿಗೆ ಸ್ಪಂದಿಸಬೇಕು. ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಕಚೇರಿ ದಿನದ 24 ಗಂಟೆಯೂ ಕಾರ್ಯಕರ್ತರಿಗೆ ಲಭ್ಯವಿರುವಂತಾಗಬೇಕು ಎಂದು ಅವರು ಹೇಳಿದರು. ಮುಂಬರುವ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ತಳಮಟ್ಟದಿಂದ ಬಲಪಡಿಸುವ ಕಾರ್ಯ ನಡೆಯಬೇಕು ಎಂದು ಮಂಜುನಾಥ್ ಭಂಡಾರಿ ತಿಳಿಸಿದರು. 

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್ ಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ.ಎ. ಗಫೂರ್, ಮಾಜಿ ಶಾಸಕ ಗೋಪಾಲ್ ಪೂಜಾರಿ, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ಪ್ರಚಾರ ಸಮಿತಿ ಅಧ್ಯಕ್ಷ ಅಲೆವೂರು ಹರೀಶ್ ಕಿಣಿ, ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್, ಹರಿಪ್ರಸಾದ್ ರೈ, ವೆರೋನಿಕ ಕರ್ನೆಲಿಯೋ ಮೊದಲಾದವರು ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article