ಉಡುಪಿ ಕಿನ್ನಿಮೂಲ್ಕಿ ಸ್ವಾಗತ ಗೋಪುರ ಬಳಿ 21ನೇ ವರ್ಷದ ಗಣೇಶೋತ್ಸವ
Tuesday, September 15, 2026
ಕನ್ನರ್ಪಾಡಿ–ಕಿನ್ನಿಮುಲ್ಕಿ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ವತಿಯಿಂದ ಕಿನ್ನಿಮುಲ್ಕಿ ಸ್ವಾಗತ ಗೋಪುರದ ಬಳಿಯ ಗಣಪತಿ ಮೈದಾನದಲ್ಲಿ 21ನೇ ವರ್ಷದ ಗಣೇಶೋತ್ಸವವು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ನಡೆಯುತ್ತಿದೆ.
ಉತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಪೂಜೆ, ರಂಗಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸೆ.15ರಂದು ಸಂಜೆ 5 ಗಂಟೆಯಿಂದ ಭಕ್ತಿಗೀತೆ, ಭಾವಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ಜರುಗಲಿದೆ. ಸಿವಿಲ್ ಎಂಜಿನಿಯರ್ ಎಂ. ಗಂಗಾಧರ ರಾವ್ ಕನ್ನರ್ಪಾಡಿ (ನಂದಕುಮಾರ್) ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನಾಡೋಜ ಡಾ. ಕೃಷ್ಣ ಪ್ರಸಾದ್ ಅಧ್ಯಕ್ಷತೆ ವಹಿಸುವರು. ಇದೇ ಸಂದರ್ಭದಲ್ಲಿ ವಿದ್ಯಾನಿಧಿ ವಿತರಣೆ ನಡೆಯಲಿದೆ.
ರಾತ್ರಿ 9 ಗಂಟೆಗೆ ‘ಜಾಂಬವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ನಡೆಯಲಿದೆ.
ಸೆ.23ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಗಣೇಶೋತ್ಸವ ನಡೆಯಲಿದ್ದು, ಕೊನೆಯ ದಿನ ಸಾರ್ವಜನಿಕ ಗಣೇಶ ಮೂರ್ತಿಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ನಾಸಿಕ್ ಡೋಲು, ಕರಾವಳಿಯ ಸಾಂಪ್ರದಾಯಿಕ ಚಂಡೆ ವಾದನ ಹಾಗೂ ತಟ್ಟಿರಾಯ ವೇಷಧಾರಿಗಳೊಂದಿಗೆ ಸಾಗುವ ಶೋಭಾಯಾತ್ರೆ ವಿಶೇಷ ಆಕರ್ಷಣೆಯಾಗಲಿದೆ.