ಸೆ.27: ವಿದ್ಯಾಪೋಷಕ್‌ನಿಂದ 1,273 ವಿದ್ಯಾರ್ಥಿಗಳಿಗೆ 1.75 ಕೋಟಿ ಸಹಾಯಧನ ವಿತರಣೆ
ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆ ವಿದ್ಯಾಪೋಷಕ್‌ನ 22ನೇ ವರ್ಷದ ಸಹಾಯಧನ ವಿತರಣಾ ಸಮಾರಂಭ ಸೆ.27ರಂದು ಉಡುಪಿ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್ ತಿಳಿಸಿದ್ದಾರೆ.
ಗುರುವಾರ ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9.30ರಿಂದ ಸಂಜೆ 4.30ರವರೆಗೆ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಪರ್ಯಾಯ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಉದ್ಘಾಟಿಸಲಿದ್ದಾರೆ. ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ. ಮಾಹೆಯ ಸಹಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅಧ್ಯಕ್ಷತೆ ವಹಿಸಲಿದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಮೋಹನ್ ಆಳ್ವ ಶುಭಾಶಂಸನೆಗೈಯಲಿದ್ದಾರೆ.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿರಲಿದ್ದು, ವಿದ್ಯಾಪೋಷಕ್ ವಿದ್ಯಾರ್ಥಿಗಳ ಕುಟುಂಬಗಳಿಗೆ ಮಾಹೆಯ ವತಿಯಿಂದ ನೀಡಲಾಗಿರುವ ಉಚಿತ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕಾರ್ಡ್‌ಗಳನ್ನು ವಿತರಿಸಲಾಗುವುದು ಎಂದು ತಿಳಿಸಿದರು.
ಅಪರಾಹ್ನ 2.30ಕ್ಕೆ ನಡೆಯುವ ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಪರ್ಯಾಯ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಉಡುಪಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಅಧ್ಯಕ್ಷ ನಾಡೋಜ ಡಾ. ಜಿ. ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಯಕ್ಷಗಾನ ಕಲಾರಂಗದ ವಾರ್ಷಿಕ ಸಂಚಿಕೆ ‘ಕಲಾಂತರಂಗ 2026’ ಅನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಬಿಡುಗಡೆಗೊಳಿಸಲಿದ್ದಾರೆ. ಕರ್ಣಾಟಕ ಬ್ಯಾಂಕ್‌ನ ಜಿ.ಎಂ. ಬಿ.ಜಿ. ಸಾಮಗ ಶುಭಾಶಂಸನೆಗೈಯಲಿದ್ದಾರೆ. ಡಿಆರ್‌ಎಂ ಇನ್‌ಫೋಸಿಸ್‌ನ ಉಪಾಧ್ಯಕ್ಷ ವಾಸುದೇವ ಕಾಮತ್ ಲ್ಯಾಪ್‌ಟಾಪ್‌ಗಳನ್ನು ವಿತರಿಸಲಿದ್ದಾರೆ.
ವಿದ್ಯಾಪೋಷಕ್‌ನ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ಸಂಸ್ಥೆಯ ವತಿಯಿಂದ ಈವರೆಗೆ 103 ಮನೆಗಳನ್ನು ನಿರ್ಮಿಸಿಕೊಡಲಾಗಿದ್ದು, 21 ಮನೆಗಳು ನಿರ್ಮಾಣ ಹಂತದಲ್ಲಿವೆ. ಇನ್ನೂ 32 ಮನೆಗಳ ನಿರ್ಮಾಣಕ್ಕೆ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಈ ಬಾರಿ ವಿದ್ಯಾಪೋಷಕ್ ಹಾಗೂ ಯಕ್ಷಗಾನ ಕಲಾವಿದರ ಮಕ್ಕಳೂ ಸೇರಿದಂತೆ ಒಟ್ಟು 1,273 ವಿದ್ಯಾರ್ಥಿಗಳಿಗೆ ₹1,75,81,500 ಸಹಾಯಧನ ವಿತರಿಸಲಾಗುವುದು. ಇದರೊಂದಿಗೆ 15 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ಗಳನ್ನು ನೀಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ ಹಾಗೂ ನಾರಾಯಣ ಹೆಗಡೆ ಉಪಸ್ಥಿತರಿದ್ದರು.