ಉಡುಪಿ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬ್ಯಾಂಕ್ ನೌಕರರ ಮುಷ್ಕರ, ಪ್ರತಿಭಟನಾ ಪ್ರದರ್ಶನ
Friday, September 11, 2026
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿದ್ದ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಉಡುಪಿಯಲ್ಲಿ ಬೆಂಬಲ ವ್ಯಕ್ತವಾಯಿತು.
ವಾರದಲ್ಲಿ ಐದು ದಿನ ಬ್ಯಾಂಕ್‌ಗಳು ಕಾರ್ಯನಿರ್ವಹಿಸುವ ವ್ಯವಸ್ಥೆ ಜಾರಿಗೆ ತರಬೇಕು, ವೇತನ ಹಾಗೂ ಪಿಂಚಣಿ ಸೇರಿದಂತೆ ಬಾಕಿ ಇರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಬೇಕು ಹಾಗೂ ಏಕಪಕ್ಷೀಯ ಮತ್ತು ತಾರತಮ್ಯಪೂರಿತ ಕಾರ್ಯಕ್ಷಮತೆ ಆಧಾರಿತ ಪ್ರೋತ್ಸಾಹಧನ (PLI) ವ್ಯವಸ್ಥೆಯನ್ನು ವಿರೋಧಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ನೇತೃತ್ವದಲ್ಲಿ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಲಾಗಿತ್ತು.
ಇದರ ಅಂಗವಾಗಿ ಶುಕ್ರವಾರ ಉಡುಪಿ ಕೋರ್ಟ್ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯ ಸಮೀಪ ಬ್ಯಾಂಕ್ ನೌಕರರು ಹಾಗೂ ಸಿಬ್ಬಂದಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಸಿದರು. ಪ್ರತಿಭಟನೆಯಲ್ಲಿ ವಿವಿಧ ಬ್ಯಾಂಕ್ ನೌಕರರ ಸಂಘಟನೆಗಳ ಸದಸ್ಯರು ಭಾಗವಹಿಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಬ್ಯಾಂಕ್ ನೌಕರರ ನ್ಯಾಯಯುತ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.