SIRನಲ್ಲಿ ವಾಸ್ತವ್ಯ ದೃಢೀಕರಣ ಪತ್ರದ ಗೊಂದಲ ಪರಿಹರಿಸಲು ಜಿಲ್ಲಾಧಿಕಾರಿಗೆ ಕಾಂಗ್ರೆಸ್ ಮನವಿ
Friday, September 11, 2026
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನೈಜ ಮತದಾರರಿಗೆ ವಾಸ್ತವ್ಯ ದೃಢೀಕರಣ ಪತ್ರ ಪಡೆಯುವಲ್ಲಿ ಉಂಟಾಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರಿಗೆ ಮನವಿ ಸಲ್ಲಿಸಲಾಯಿತು.
ಚುನಾವಣಾ ಆಯೋಗದ ನಿರ್ದೇಶನದಂತೆ ನಡೆಯುತ್ತಿರುವ SIR ಪ್ರಕ್ರಿಯೆಯಲ್ಲಿ ಮತದಾರರ ವಿವರಗಳಲ್ಲಿನ ವ್ಯತ್ಯಾಸ ಸೇರಿದಂತೆ ವಿವಿಧ ಕಾರಣಗಳಿಂದಾಗಿ ಹಲವರಿಗೆ ನೋಟಿಸ್‌ಗಳು ಜಾರಿಯಾಗಿವೆ. ನೋಟಿಸ್‌ನಲ್ಲಿ ಸೂಚಿಸಿರುವ ದಾಖಲೆಗಳು ಲಭ್ಯವಿಲ್ಲದ ಮತದಾರರು ಚುನಾವಣಾ ಆಯೋಗವು ಮಾನ್ಯ ಮಾಡುವ ವಾಸ್ತವ್ಯ ದೃಢೀಕರಣ ಪತ್ರಕ್ಕಾಗಿ ಸ್ಥಳೀಯ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸುತ್ತಿದ್ದಾರೆ. ಆದರೆ, ಬಾಡಿಗೆ ಮನೆಗಳಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿರುವವರು, ಸೂಕ್ತ ದಾಖಲೆಗಳನ್ನು ಹೊಂದಿರದವರು ಹಾಗೂ ಹಳೆಯ ದಾಖಲೆಗಳಲ್ಲಿ ವಿಳಾಸದ ವ್ಯತ್ಯಾಸ ಹೊಂದಿರುವವರು ವಾಸ್ತವ್ಯ ದೃಢೀಕರಣ ಪತ್ರ ಪಡೆಯಲು ಕಂದಾಯ ಕಚೇರಿಗಳಿಗೆ ಪದೇಪದೇ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕಾಂಗ್ರೆಸ್ ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಅರ್ಹ ನಾಗರಿಕರು ತಮ್ಮ ಮತದಾನದ ಸಾಂವಿಧಾನಿಕ ಹಕ್ಕಿನಿಂದ ವಂಚಿತರಾಗದಂತೆ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದೇ ರೀತಿಯ ಧಕ್ಕೆಯಾಗದಂತೆ SIR ಪ್ರಕ್ರಿಯೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ಅರ್ಹ ಮತದಾರರು ವಾಸ್ತವ್ಯ ದೃಢೀಕರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಿದ ಕೂಡಲೇ ನಿಯಮಾನುಸಾರ ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡುವಂತೆ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಲಾಯಿತು.
ಈ ಸಂದರ್ಭದಲ್ಲಿ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್, ಕಾಂಗ್ರೆಸ್ ಮುಖಂಡರಾದ ಮಹಾಬಲ ಕುಂದರ್, ಕೃಷ್ಣ ಹೆಬ್ಬಾರ್, ಹರಿಪ್ರಸಾದ್ ರೈ, ಗಣೇಶ್ ನೆರ್ಗಿ, ಸತೀಶ್ ಕೊಡವೂರು, ಸುಕೇಶ್ ಕುಂದರ್, ಸತೀಶ್ ಕುಮಾರ್ ಮಂಚಿ, ಶಶಿರಾಜ್ ಕುಂದರ್, ಲಕ್ಷ್ಮಣ್ ಪೂಜಾರಿ, ಮಮತಾ ಶೆಟ್ಟಿ, ಆಶಾ ಚಂದ್ರಶೇಖರ್, ಸಂಧ್ಯಾ ತಿಲಕ್‌ರಾಜ್, ಸದಾನಂದ್ ಕುಲಾಲ್, ಆರೀಫ್, ಬೋನಿಫಾಸ್, ಭರತ್ ಕುಮಾರ್, ಶಕುಂತಲಾ, ದಯಾನಂದ್ ಹಾಗೂ ಸಂಜಯ್ ಆಚಾರ್ಯ ಉಪಸ್ಥಿತರಿದ್ದರು.
.jpeg)