ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ವಕೀಲರ ನಿಯೋಗ ಮನವಿ
Friday, September 18, 2026
ಮಂಗಳೂರಿನಲ್ಲಿ ಕರ್ನಾಟಕ ಹೈಕೋರ್ಟ್ ಪೀಠ ಸ್ಥಾಪಿಸುವಂತೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಬಂಟ್ವಾಳ ಮತ್ತು ಬೆಳ್ತಂಗಡಿ ಸೇರಿದಂತೆ ವಿವಿಧೆಡೆ ನ್ಯಾಯಾಂಗ ಮೂಲಸೌಕರ್ಯ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಸಚಿವ ಸಂಪುಟದ ಅನುಮೋದನೆ ಕೋರಿ ವಕೀಲರ ನಿಯೋಗ ಮನವಿ ಸಲ್ಲಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ವಕೀಲರಿಗೆ ಕೈಗೆಟುಕುವ ದರದಲ್ಲಿ ವಸತಿ ನಿವೇಶನ ಒದಗಿಸುವ ಉದ್ದೇಶದಿಂದ ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ವಕೀಲರಿಗಾಗಿ ವಸತಿ ಬಡಾವಣೆ ನಿರ್ಮಿಸಲು ಸೂಕ್ತ ಸರ್ಕಾರಿ ಭೂಮಿಯನ್ನು ಮಂಜೂರು ಮಾಡುವಂತೆಯೂ ನಿಯೋಗ ಪ್ರತ್ಯೇಕ ಮನವಿ ಸಲ್ಲಿಸಿದೆ. ಈ ಮೂಲಕ ವಕೀಲರ ಬಹುಕಾಲದ ಬೇಡಿಕೆಯನ್ನು ಈಡೇರಿಸುವಂತೆ ಮನವಿ ಮಾಡಲಾಗಿದೆ.
ಇ
ದೇ ವೇಳೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿಯಾದ ವಕೀಲರ ನಿಯೋಗ, ಮಂಗಳೂರು ಕೇಂದ್ರ ಕಾರಾಗೃಹದಲ್ಲಿರುವ ಮೊಬೈಲ್ ಸಿಗ್ನಲ್ ಜಾಮರ್‌ಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಿತು. ದಕ್ಷಿಣ ಕನ್ನಡ ಜಿಲ್ಲೆಯ ನ್ಯಾಯಾಲಯಗಳ ಮೂಲಸೌಕರ್ಯ ಹಾಗೂ ವಕೀಲರ ವಿವಿಧ ಅಗತ್ಯತೆಗಳ ಬಗ್ಗೆಯೂ ಸಚಿವರೊಂದಿಗೆ ಸಮಾಲೋಚನೆ ನಡೆಸಲಾಯಿತು.
ನ್ಯಾಯಾಂಗ ಮೂಲಸೌಕರ್ಯವನ್ನು ಬಲಪಡಿಸುವುದು, ನ್ಯಾಯಾಂಗ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವುದು ಹಾಗೂ ಜಿಲ್ಲೆಯ ವಕೀಲರ ಮೂಲಸೌಕರ್ಯ ಮತ್ತು ವಸತಿ ಸಂಬಂಧಿತ ನ್ಯಾಯಸಮ್ಮತ ಬೇಡಿಕೆಗಳನ್ನು ಈಡೇರಿಸುವ ಉದ್ದೇಶದಿಂದ ಈ ಮನವಿಗಳನ್ನು ಸಲ್ಲಿಸಲಾಗಿದೆ ಎಂದು ನಿಯೋಗ ತಿಳಿಸಿದೆ.
ಈ ವೇಳೆ ಹಿರಿಯ ವಕೀಲ ಅಶ್ವಿನಿ ಕುಮಾರ್ ರೈ, ಸುರೇಶ್ ನವೂರು, ಅರುಣ್ ಬಿ.ಪಿ, ವಿನೋಧರ್ ಪೂಜಾರಿ, ಪ್ರವೀಣ್ ಕುಮಾರ್ ಅಡ್ಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು ಎಂದು DKDCC ಲೀಗಲ್, ಹ್ಯುಮನ್ ರೈಟ್ಸ್ ಆ್ಯಂಡ್ ಆರ್‌ಟಿಐ ಡಿಪಾರ್ಟ್‌ಮೆಂಟ್ ಚೆಯರ್ ಮ್ಯಾನ್, ವಕೀಲ ಮನೋರಾಜ್ ರಾಜೀವ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

