ಸೌದಿಯಲ್ಲಿ ಉದ್ಯೋಗಕ್ಕಾಗಿ ತೆರಳಿದ್ದ ಮಂಗಳೂರಿನ ಯುವಕ ದಿಢೀರ್ ಸಾವು
ಕೆಲಸಕ್ಕಾಗಿ ಸೌದಿ ಅರೇಬಿಯಾಕ್ಕೆ ತೆರಳಿದ್ದ ಮಂಗಳೂರು ಸಮೀಪದ ಕುತ್ತಾರಿನ ಅವಿವಾಹಿತ ಯುವಕನೋರ್ವ ತಾನು ವಾಸವಿದ್ದ ಕೊಠಡಿಯಲ್ಲೇ ದಿಢೀರ್ ಮೃತಪಟ್ಟ ಘಟನೆ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಕುತ್ತಾರುವಿನ ಕೊರಗಜ್ಜನ ಆದಿಕ್ಷೇತ್ರದ ಸಮೀಪದ ನಿವಾಸಿ ಶರತ್ ಕುಮಾರ್ (35) ಮೃತ ಯುವಕ. ಅವರು ಐದು ತಿಂಗಳ ಹಿಂದಷ್ಟೇ ಸೌದಿ ಅರೇಬಿಯಾಕ್ಕೆ ತೆರಳಿದ್ದು, ಅಲ್ಲಿನ ಕನ್ಸ್ಟ್ರಕ್ಷನ್ ಕಂಪನಿಯೊಂದರಲ್ಲಿ ಸೂಪರ್‌ವೈಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದರು.
ಶರತ್ ಅವರು ತಮಿಳುನಾಡು ಮೂಲದ ಸಹೋದ್ಯೋಗಿಯೊಂದಿಗೆ ಕಂಪನಿಯ ವಸತಿ ಕೊಠಡಿಯಲ್ಲಿ ವಾಸವಾಗಿದ್ದರು. ಸೋಮವಾರ ರಾತ್ರಿ ಸುಮಾರು 11 ಗಂಟೆಗೆ ಕೊಠಡಿ ಸಹವರ್ತಿ ಬಂದಾಗ ಶರತ್ ಮಲಗಿದ್ದರು. ಮಂಗಳವಾರ ಬೆಳಗ್ಗೆ ಕೆಲಸಕ್ಕೆ ತೆರಳಬೇಕಿದ್ದ ಹಿನ್ನೆಲೆಯಲ್ಲಿ ಶರತ್ ಅಲಾರಾಂ ಇಟ್ಟು ಮಲಗಿದ್ದರು ಎನ್ನಲಾಗಿದೆ.
ಬೆಳಗ್ಗೆ ಅಲಾರಾಂ ಸದ್ದು ಮಾಡಿದರೂ ಶರತ್ ಎದ್ದೇಳದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪರಿಶೀಲಿಸಿದಾಗ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ಪ್ರಾಥಮಿಕ ಮಾಹಿತಿಯಂತೆ ಹೃದಯಾಘಾತದಿಂದ ಅವರು ಮೃತಪಟ್ಟಿರುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಸೋಮವಾರ ತಡರಾತ್ರಿವರೆಗೂ ಶರತ್ ಅವರು ಮಂಗಳೂರಿನಲ್ಲಿದ್ದ ತಮ್ಮ ಅಣ್ಣನೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು ಎನ್ನಲಾಗಿದೆ. ಆದರೆ ಬೆಳಗಾಗುವಷ್ಟರಲ್ಲಿ ಸಂಭವಿಸಿದ ಈ ದುರಂತ ಕುಟುಂಬಸ್ಥರು ಹಾಗೂ ಬಂಧು-ಮಿತ್ರರಿಗೆ ತೀವ್ರ ಆಘಾತವನ್ನುಂಟು ಮಾಡಿದೆ.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೌದಿಯ ಆಸ್ಪತ್ರೆಗೆ ರವಾನಿಸಲಾಗಿದ್ದು, ಪ್ರಾಥಮಿಕ ವರದಿಯಲ್ಲಿ ಹೃದಯಾಘಾತವೇ ಸಾವಿಗೆ ಕಾರಣ ಎಂದು ತಿಳಿದುಬಂದಿದೆ. ಮೃತದೇಹವನ್ನು ತಾಯ್ನಾಡಿಗೆ ತರಲು ಅಗತ್ಯವಿರುವ ಪ್ರಕ್ರಿಯೆಗಳನ್ನು ಕುಟುಂಬಸ್ಥರು ಕೈಗೊಂಡಿದ್ದಾರೆ.
ಶರತ್ ಕುಮಾರ್ ಅವರು ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾರೆ.