ಕರಾವಳಿಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರಕ್ಕೆ ಸಚಿವ ಸಂಪುಟ ಸಭೆ: ಕೆ.ಎಸ್. ಬಸವಂತಪ್ಪ
ಕರಾವಳಿ ಭಾಗದ ಸಮಗ್ರ ಅಭಿವೃದ್ಧಿ ಹಾಗೂ ಇಲ್ಲಿನ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸೆ.18ರಂದು ಮಂಗಳೂರಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆಯಲಿದೆ ಎಂದು ಮುಜರಾಯಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಕೆ.ಎಸ್. ಬಸವಂತಪ್ಪ ಹೇಳಿದರು.
ಉಡುಪಿಯ ಕಾಂಗ್ರೆಸ್ ಭವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಕರಾವಳಿ ಭಾಗದ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಸಭೆ ನಡೆಯಲಿದೆ. ಸಚಿವ ಸಂಪುಟ ಸಭೆಯಲ್ಲಿ ಯಾವೆಲ್ಲ ವಿಷಯಗಳ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂಬುದು ಸಭೆಯಲ್ಲೇ ತಿಳಿಯಲಿದೆ ಎಂದರು.
ಸಚಿವ ಸಂಪುಟ ಸಭೆ ಎರಡು ಗಂಟೆಗಳಲ್ಲೂ ಮುಗಿಯಬಹುದು ಅಥವಾ ಸಂಜೆವರೆಗೂ ನಡೆಯಬಹುದು. ಕರಾವಳಿಯ ವಿವಿಧ ಭಾಗಗಳ ಸಮಸ್ಯೆಗಳನ್ನು ಖುದ್ದಾಗಿ ತಿಳಿದುಕೊಳ್ಳುವ ಉದ್ದೇಶದಿಂದ ಬಂದರು, ಮೀನು ಮಾರುಕಟ್ಟೆ, ಜಟ್ಟಿ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿದ್ದೇನೆ. ನಾಡದೋಣಿ ಮೀನುಗಾರರು ಹಾಗೂ ಕಾರ್ಮಿಕರ ಬೇಡಿಕೆ ಮತ್ತು ಸಮಸ್ಯೆಗಳನ್ನು ಆಲಿಸಿದ್ದೇನೆ ಎಂದು ಹೇಳಿದರು.
ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಇಂತಹ ಸಭೆಗಳನ್ನು ನಡೆಸುವ ಉದ್ದೇಶವಿದೆ. ಕರಾವಳಿ ಭಾಗದ ಜನರ ಪ್ರಮುಖ ಬೇಡಿಕೆಗಳಲ್ಲಿ ಬ್ರೇಕ್‌ವಾಟರ್ ನಿರ್ಮಾಣವೂ ಒಂದಾಗಿದೆ. ಈ ಕುರಿತು ಗಮನ ಹರಿಸಲಾಗುವುದು. ಕೇರಳ ಮಾದರಿಯಲ್ಲಿ ತಡೆಗೋಡೆ ನಿರ್ಮಿಸುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಸಚಿವ ಬಸವಂತಪ್ಪ ತಿಳಿಸಿದರು.