-->
ಮಣಿಪಾಲ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಯುವಕನ ಬಂಧನ

ಮಣಿಪಾಲ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ: ಯುವಕನ ಬಂಧನ


ಮಣಿಪಾಲದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆತ್ಮಹತ್ಯೆಗೆ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್‌ಮೇಲ್ ಮಾಡಿರುವ ಆರೋಪದ ಮೇಲೆ ಯುವಕನೊಬ್ಬನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂ ರಾಜ್ಯದ ನಾಗಾಂವ್ ನಿವಾಸಿ ಲೆಸ್ಲಿ ಜೋಸೆಫ್ ಮ್ಯಾಥ್ಯೂ (60) ಅವರ ಪುತ್ರಿ ಪೌಲಾ ಲೆಸ್ಲಿ ವಾರ್ಜ್ರಿ ಅವರು ಮಣಿಪಾಲದ ಕಾಲೇಜಿನಲ್ಲಿ ದ್ವಿತೀಯ ವರ್ಷದ ವಿದ್ಯಾಭ್ಯಾಸ ಮಾಡುತ್ತಿದ್ದರು. 2025ರ ನವೆಂಬರ್ 7ರ ರಾತ್ರಿ 11.45ರಿಂದ ನವೆಂಬರ್ 8ರ ಬೆಳಗ್ಗೆ 8.40ರ ನಡುವಿನ ಅವಧಿಯಲ್ಲಿ ಕಾಯಿನ್ ಸರ್ಕಲ್ ಬಳಿಯ ಐರಿಸ್ ಪ್ಲಾಜಾ ಕಟ್ಟಡದ 504ನೇ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಈ ಕುರಿತು ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಿ ಅಂತಿಮ ವರದಿ ಸಲ್ಲಿಸಿ ಪ್ರಕರಣವನ್ನು ಮುಕ್ತಾಯಗೊಳಿಸಲಾಗಿತ್ತು. ಬಳಿಕ ಮೃತ ವಿದ್ಯಾರ್ಥಿನಿಯ ಆಪಲ್ ಐಪ್ಯಾಡ್, ಐಫೋನ್, ಡೈರಿ ಹಾಗೂ ಇತರ ಡಿಜಿಟಲ್ ದಾಖಲೆಗಳನ್ನು 

 ಪರಿಶೀಲಿಸಿದಾಗ ಸಾಯಿ ಭಿಂಗಾರೆ ಅಲಿಯಾಸ್ ಸಾಯಿ ಪಾಟೀಲ್ ಎಂಬಾತನೊಂದಿಗೆ ಮೃತ ಯುವತಿ ಸ್ನ್ಯಾಪ್‌ಚಾಟ್ ಮೂಲಕ ನಡೆಸಿದ್ದ ಸಂವಹನದ ದಾಖಲೆಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಕಿರುಕುಳ, ಬಲವಂತ ಅಥವಾ ಬ್ಲ್ಯಾಕ್‌ಮೇಲ್ ಮಾಡಿರುವ ಸಾಧ್ಯತೆಯ ಬಗ್ಗೆ ಆಕೆಯ ತಂದೆ ಅನುಮಾನ ವ್ಯಕ್ತಪಡಿಸಿ ಕಾನೂನು ಕ್ರಮಕ್ಕೆ ಮನವಿ ಮಾಡಿದ್ದರು.

ಈ ದೂರಿನ ಆಧಾರದ ಮೇಲೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ನಂ.90/2026ರಂತೆ ಬಿಎನ್‌ಎಸ್ ಕಲಂ 308(5)ರಡಿ ಪ್ರಕರಣ ದಾಖಲಿಸಲಾಗಿತ್ತು. ಮಣಿಪಾಲ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್ ಅವರ ಸೂಚನೆಯಂತೆ ಪಿಎಸ್‌ಐ ತಿಮ್ಮೇಶ್ ಬಿ.ಎನ್. ತನಿಖೆ ಕೈಗೊಂಡು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು ಕೇಂದ್ರಾಡಳಿತ ಪ್ರದೇಶದ ನಿವಾಸಿ, ಸಂಜಯ್ ಬಿಂಗಾರೆ ಅವರ ಪುತ್ರ ಸಾಯಿ ಸಂಜಯ್ ಬಿಂಗಾರೆ (21) ಎಂಬಾತನನ್ನು ಸೆಪ್ಟೆಂಬರ್ 9ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರೋಪಿಯು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

Ads on article

Advertise in articles 1

advertising articles 2

Advertise under the article