ಗಣೇಶ ಹಬ್ಬ ರಾಷ್ಟ್ರೀಯತೆಯ ಆಚರಣೆಯಾಗಲಿ: ಸು.ರಾಮಣ್ಣ
ಗಣೇಶೋತ್ಸವವು ರಾಷ್ಟ್ರೀಯತೆಯ ಆಚರಣೆಯಾಗಬೇಕು ಎಂದು ಆರ್‌ಎಸ್‌ಎಸ್‌ನ ಹಿರಿಯ ಪ್ರಚಾರಕ ಸು.ರಾಮಣ್ಣ ಆಶಿಸಿದರು.
ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಳದ ಕಾತ್ಯಾಯಿನಿ ಮಂಟಪದಲ್ಲಿ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ವಜ್ರಮಹೋತ್ಸವದ ಅಂಗವಾಗಿ ಗುರುವಾರ ನಡೆದ ಧಾರ್ಮಿಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಯತೆಯ ಸಂಕೇತವಾಗಿರುವ ರಾಷ್ಟ್ರಧ್ವಜ ಕೇವಲ ಬಾವುಟವಲ್ಲ. ಧ್ವಜವನ್ನು ನೋಡಿದಾಗ ದೇಶವನ್ನು ಸ್ಮರಿಸುವಂತಾಗಬೇಕು. ಭಗವಂತ ಎಲ್ಲೆಡೆ ಇದ್ದಾನೆ. ದೇವರ ಅಸ್ತಿತ್ವ ಮೂಢನಂಬಿಕೆಯಲ್ಲ. ಭಗವಂತನಿಗೆ ಲಿಂಗ ತಾರತಮ್ಯವಿಲ್ಲ. ಅಂತಃಕರಣಪೂರ್ವಕವಾಗಿ ನಂಬಿದವರನ್ನು ದೇವರು ಕೈಬಿಡುವುದಿಲ್ಲ ಎಂದು ಅವರು ಹೇಳಿದರು.
ಕುಣಿತ ಭಜನೆ ಸ್ಪರ್ಧೆಯನ್ನು ಉದ್ಘಾಟಿಸಿದ ಸಗ್ರಿ ಶ್ರೀ ವಾಸುಕಿ ಸುಬ್ರಹ್ಮಣ್ಯ ದೇವಳದ ಗೋಪಾಲಕೃಷ್ಣ ಸಾಮಗ ಮಾತನಾಡಿ, ಪ್ರಕೃತಿಯೇ ದೇವರು ಎಂಬ ತತ್ವದಲ್ಲಿ ಗಣಪತಿ ಪೂಜೆ ಸೇರಿದಂತೆ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯಬೇಕು. ಸತ್ಕಾರ್ಯ ಮತ್ತು ಸತ್ಸಂಗದ ಮೂಲಕ ಸಮಾಜಕ್ಕೆ ಒಳಿತಾಗಲು ಸಾಧ್ಯ. ಭಜನೆಯ ಮೂಲಕ ಸಮಾಜ ಹಾಗೂ ದೇಶದ ಸಂಕಟಗಳು ನಿವಾರಣೆಯಾಗಿ ಸಮೃದ್ಧಿ ಮತ್ತು ಶಾಂತಿ ನೆಲೆಸಲಿ ಎಂದು ಹಾರೈಸಿದರು.
ಸಮಿತಿ ಗೌರವಾಧ್ಯಕ್ಷ ಹಾಗೂ ಉಡುಪಿ ಶಾಸಕ ಯಶಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿದ್ದರು. ಕಿದಿಯೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಕೆ.ಉದಯ ಕುಮಾರ್ ಶೆಟ್ಟಿ, ಉದ್ಯಮಿ ಕೆ.ರಮಾನಂದ ಪ್ರಭು, ದೇವಳದ ಅರ್ಚಕ ಮುರಳಿಕೃಷ್ಣ ಉಪಾಧ್ಯ, ಕುಣಿತ ಭಜನೆ ಸಂಚಾಲಕ ಅರುಣ್ ಕುಂದರ್, ಜಾನಪದ ಮತ್ತು ಭಜನಾ ಸಂಪನ್ಮೂಲ ವ್ಯಕ್ತಿ ರಮೇಶ್ ಕಲ್ಮಾಡಿ ಹಾಗೂ ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ.ವಸಂತ ಭಟ್ ಉಪಸ್ಥಿತರಿದ್ದರು.
ಖ್ಯಾತಿ ಭಟ್ ವಂದೇ ಮಾತರಂ ಹಾಡಿದರು. ವಜ್ರಮಹೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ. ಅಂಚನ್ ಸ್ವಾಗತಿಸಿದರು. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ರಾಘವೇಂದ್ರ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಶಾಧಿಕಾರಿ ಎಂ.ವಲ್ಲಭ ಭಟ್ ವಂದಿಸಿದರು. ಅಕ್ಷತಾ ಮತ್ತು ಸರಿತಾ ಕಾರ್ಯಕ್ರಮ ನಿರೂಪಿಸಿದರು.
ವಜ್ರಮಹೋತ್ಸವದ ಅಂಗವಾಗಿ 100 ಮಹಿಳೆಯರಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಸೆ.19ರಂದು ಸುಮಾರು 8 ಸಾವಿರ ಭಕ್ತರಿಗೆ ಅನ್ನಸಂತರ್ಪಣೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಪ್ರತಿದಿನ ಸಂಕಷ್ಟಹರ ಗಣಪತಿ ಸನ್ನಿಧಿಯಲ್ಲಿ ಕಾಲೇಜು ವಿದ್ಯಾರ್ಥಿಗಳಿಂದ ಧ್ಯಾನ ಕಾರ್ಯಕ್ರಮವೂ ನಡೆಯುತ್ತಿದೆ.