ಮಾನಸಿಕ ಅಸ್ವಸ್ಥತೆಯಿಂದ ಚೇತರಿಸಿಕೊಂಡರೂ ಕುಟುಂಬದ ಬೆಂಬಲವಿಲ್ಲದೆ ಆಶ್ರಮ ಸೇರಿದ ಶಿಕ್ಷಕಿ
ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಶಿಕ್ಷಕಿಯೊಬ್ಬರು ಚಿಕಿತ್ಸೆ ಹಾಗೂ ಆರೈಕೆಯ ಬಳಿಕ ಚೇತರಿಸಿಕೊಂಡರೂ, ಕುಟುಂಬದವರಿಂದ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಇದೀಗ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಕಲ್ಪಿಸಲಾಗಿದೆ.
ಬ್ರಹ್ಮಾವರ ಠಾಣಾ ವ್ಯಾಪ್ತಿಯ ಬೈಕಾಡಿಯ ನಿವಾಸಿ ಶಿಕ್ಷಕಿ ಸವಿತಾ ಮೊಗವೀರ (45) ಅವರನ್ನು ಸುಮಾರು ಒಂದೂವರೆ ವರ್ಷದ ಹಿಂದೆ ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ರಕ್ಷಿಸಿ, ಮಂಜೇಶ್ವರದ ಶ್ರೀ ಸಾಯಿ ಸೇವಾಶ್ರಮದಲ್ಲಿರುವ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಹಾಗೂ ಆರೈಕೆ ಪಡೆದ ಬಳಿಕ ಸವಿತಾ ಅವರು ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿದ್ದರು.
ಆಶ್ರಮದಿಂದ ಬಿಡುಗಡೆಗೊಂಡ ಬಳಿಕ ಸವಿತಾ ಅವರು ತಮ್ಮ ಮೂಲ ಮನೆಗೆ ತೆರಳುವ ಇಚ್ಛೆ ವ್ಯಕ್ತಪಡಿಸಿದ್ದರು. ಅದರಂತೆ ಅವರನ್ನು ಬೈಕಾಡಿಯಲ್ಲಿರುವ ಮನೆಗೆ ಕರೆದುಕೊಂಡು ಹೋದಾಗ ಮನೆಯ ಬಾಗಿಲು ಮುಚ್ಚಿರುವುದು ಕಂಡುಬಂದಿದೆ. ಬಳಿಕ ಬ್ರಹ್ಮಾವರ ಠಾಣೆಯ ಎಸ್‌ಐ ಮುಕ್ತಾ, ಸಖಿ ಕೇಂದ್ರದ ಸಿಬ್ಬಂದಿ ಹಾಗೂ ಸ್ಥಳೀಯರು ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಸವಿತಾ ಅವರನ್ನು ಸ್ವೀಕರಿಸುವಂತೆ ಮನವೊಲಿಸಲು ಪ್ರಯತ್ನಿಸಿದರೂ ಸ್ಪಂದನೆ ದೊರೆಯಲಿಲ್ಲ ಎಂದು ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ವಿಶು ಶೆಟ್ಟಿ ಅಂಬಲಪಾಡಿ ಅವರು ಹೊಸ ಬೆಳಕು ಆಶ್ರಮದ ಮುಖ್ಯಸ್ಥೆ ತನುಲಾ ಅವರನ್ನು ಸಂಪರ್ಕಿಸಿ ಸವಿತಾ ಅವರಿಗೆ ಆಶ್ರಯ ಕಲ್ಪಿಸುವಂತೆ ಮನವಿ ಮಾಡಿದರು. ಮನವಿಗೆ ಸ್ಪಂದಿಸಿದ ಆಶ್ರಮದವರು ಸವಿತಾ ಅವರನ್ನು ದಾಖಲಿಸಿಕೊಂಡಿದ್ದಾರೆ.
ಚಿಕಿತ್ಸೆಯಿಂದ ಚೇತರಿಸಿಕೊಂಡು ಸಹಜ ಸ್ಥಿತಿಗೆ ಮರಳಿರುವ ಶಿಕ್ಷಕಿ ಇದೀಗ ಮತ್ತೆ ಕುಟುಂಬದೊಂದಿಗೆ ಬದುಕುವ ಹಂಬಲ ಹೊಂದಿದ್ದಾರೆ. ಸಂಬಂಧಿಕರು ಮುಂದೆ ಬಂದು ಅವರನ್ನು ಸ್ವೀಕರಿಸಿ, ಅಗತ್ಯವಾದ ಪ್ರೀತಿ ಹಾಗೂ ಆರೈಕೆ ನೀಡಬೇಕು ಎಂಬ ಮನವಿ ಕೇಳಿಬಂದಿದೆ.
ಸವಿತಾ ಅವರ ಕುರಿತು ಮಾಹಿತಿ ಹೊಂದಿರುವವರು ಅಥವಾ ಅವರಿಗೆ ನೆರವು ನೀಡಲು ಇಚ್ಛಿಸುವವರು ಹೊಸ ಬೆಳಕು ಆಶ್ರಮವನ್ನು ಸಂಪರ್ಕಿಸಿ ಸಹಕರಿಸುವಂತೆ ಮನವಿ ಮಾಡಲಾಗಿದೆ.