ಆಡು ಮುಟ್ಟದ ಸೊಪ್ಪಿಲ್ಲ, ಕೇರಳಿಗರು ಮೆಟ್ಟದ ಮಣ್ಣಿಲ್ಲ: ಯಶಪಾಲ್ ಸುವರ್ಣ
ಕೇರಳಿಗರು ಬುದ್ಧಿವಂತರು, ಸಂಸ್ಕಾರವಂತರು ಹಾಗೂ ವಿದ್ಯಾವಂತರಾಗಿದ್ದು, ತಾವು ನೆಲೆಸಿರುವ ಯಾವುದೇ ಭಾಗದಲ್ಲೂ ತಮ್ಮ ಸಂಸ್ಕೃತಿ, ಸಂಸ್ಕಾರ ಮತ್ತು ಭಾಷೆಯ ಮೇಲಿನ ಅಭಿಮಾನವನ್ನು ಉಳಿಸಿಕೊಂಡಿದ್ದಾರೆ. ‘ಆಡು ಮುಟ್ಟದ ಸೊಪ್ಪಿಲ್ಲ, ಕೇರಳಿಗರು ಮೆಟ್ಟದ ಮಣ್ಣಿಲ್ಲ’ ಎಂಬಂತೆ ವಿಶ್ವದ ಯಾವುದೇ ಮೂಲೆಯಲ್ಲಿಯೂ ಕೇರಳಿಗರು ಯಾವುದೇ ಕೆಲಸಕ್ಕೂ ಸೈ ಎನಿಸಿಕೊಂಡಿದ್ದಾರೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಮೆಚ್ಚುಗೆ ವ್ಯಕ್ತಪಡಿಸಿದರು.
ಉಡುಪಿಯ ಚಿಟ್ಪಾಡಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ಕೇರಳ ಕಲ್ಚರಲ್ ಆ್ಯಂಡ್ ಸೋಷಿಯಲ್ ಸೆಂಟರ್ (KCSC) ವತಿಯಿಂದ ಆಯೋಜಿಸಿದ್ದ ಓಣಂ ಆಚರಣೆ ಹಾಗೂ 32ನೇ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಕೇರಳ ಹಾಗೂ ತುಳುನಾಡಿನ ನಡುವೆ ಅವಿನಾಭಾವ ಸಂಬಂಧವಿದೆ. ವ್ಯವಹಾರಿಕವಾಗಿಯೂ ಕೇರಳದ ಕರಾವಳಿಯಿಂದ ಮಂಗಳೂರು, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದವರೆಗೆ ಸೌಹಾರ್ದ ಸಂಬಂಧ ಮುಂದುವರಿದಿದೆ. ಮೂಲತಃ ಕೇರಳಿಗರಾಗಿದ್ದರೂ ತುಳುನಾಡಿನ ಸಂಸ್ಕೃತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದರು.
ನಟ, ಲೇಖಕ ಹಾಗೂ ಗಾಯಕ ರಾಜೇಶ್ ಹೆಬ್ಬಾರ್ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. KCSC ಅಧ್ಯಕ್ಷ ರಾಜನ್ ಫಿಲಿಪ್ಸ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರಿನ ನಾರ್ಕಾ ಡೆವಲಪ್‌ಮೆಂಟ್ ಆಫೀಸರ್ ಜಯಪ್ರಕಾಶ್ ಎಂ.ಕೆ. ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಡಾ. ವಿನೋದ್ ವಿ. ಥಾಮಸ್ (ಶಿಕ್ಷಣ), ಡಾ. ರಾಜೇಶ್ ನಾಯರ್ (ಆರೋಗ್ಯ), ಎಂ.ಎಲ್. ಜೋಸೆಫ್ (ಕೃಷಿ), ಲಿಯಾಖತ್ ಅಲಿ (ಕಲೆ ಮತ್ತು ಸಂಸ್ಕೃತಿ) ಹಾಗೂ ಕುಮಾರಿ ಸಾನ್ವಿ ರಾಜೇಶ್ (ನೃತ್ಯ) ಅವರಿಗೆ KCSC ಪಂಚರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
KCSC ಸದಸ್ಯರ ಕುಟುಂಬಗಳ 11 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಧನೆಗಾಗಿ ತಲಾ ₹5,000 ನಗದು ಪುರಸ್ಕಾರ ನೀಡಲಾಯಿತು. ಉಡುಪಿ ಮಿತ್ರಾ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ವೈದ್ಯಕೀಯ ಶಿಬಿರವೂ ನಡೆಯಿತು. ವಿವಿಧ ಕಾಲೇಜುಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸಾಂಸ್ಕೃತಿಕ ಹಾಗೂ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮಕ್ಕಳು ಸೇರಿದಂತೆ KCSC ಕುಟುಂಬದ ಸುಮಾರು 80 ಮಂದಿ ವಿವಿಧ ನೃತ್ಯ, ಸಂಗೀತ ಹಾಗೂ ಕಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿಶೇಷ ಮೆರುಗು ನೀಡಿತು. ಕೇರಳದ ವಿಶಿಷ್ಟ ಅತ್ತಪ್ಪೂಕಳಂ, ವಿವಿಧ ಸಾಂಪ್ರದಾಯಿಕ ಸ್ಪರ್ಧೆಗಳು, ಓಣಂ ಸದ್ಯ ಹಾಗೂ KCSC ಓಣಂ ಗೀತೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದವು.
ಇದೇ ಸಂದರ್ಭದಲ್ಲಿ KCSC ಯುವ ಘಟಕ ಹಾಗೂ ಸೂಪರ್ ಸೆವೆಂಟಿ ಘಟಕವನ್ನು ಉದ್ಘಾಟಿಸಲಾಯಿತು. ಕೇರಳದ ಕಣ್ಣೂರಿನ ಕಲಾಭವನ್ ರಾಜೇಶ್ ತಂಡದಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
KCSC ಮಾಜಿ ಅಧ್ಯಕ್ಷ ಸುಗುಣ ಕುಮಾರ್, ಕೋಶಾಧಿಕಾರಿ ಶಾಜಿ ವಿ. ಕರುಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಬಿನೇಶ್ ವಿ.ಸಿ. ಸಂಸ್ಥೆಯ ಚಟುವಟಿಕೆಗಳು ಹಾಗೂ ಸಾಧನೆಗಳನ್ನು ಒಳಗೊಂಡ ಕಾರ್ಯ ವರದಿ ಮಂಡಿಸಿದರು. ಕಾರ್ಯಕಾರಿ ಸಮಿತಿ ಸದಸ್ಯ ಬಿನಿಲ್ ವಿ. ಸ್ವಾಗತಿಸಿದರು. ಓಣಂ ಸಮಿತಿ ಅಧ್ಯಕ್ಷ ಶಿನೋಡ್ ಟಿ.ಆರ್. ವಂದಿಸಿದರು.

.jpeg)
