ಉಡುಪಿಯಲ್ಲಿ ಟೊಮೇಟೊ ದರ 10 ರೂ. ಏರಿಕೆ: ಗ್ರಾಹಕರಿಗೆ ತಟ್ಟಿದ ಬೆಲೆ ಏರಿಕೆ ಬಿಸಿ
Thursday, October 08, 2026
ಉಡುಪಿ ಜಿಲ್ಲೆಯಲ್ಲಿ ಟೊಮೇಟೊ ದರ ಮತ್ತೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಬಿಸಿ ತಟ್ಟಿದೆ. ಸೆಪ್ಟೆಂಬರ್ ಅಂತ್ಯದಲ್ಲಿ ಕೆ.ಜಿ.ಗೆ 30ರಷ್ಟಿದ್ದ ಚಿಲ್ಲರೆ ದರ, ಒಂದೇ ವಾರದಲ್ಲಿ 10 ರೂಪಾಯಿ ಏರಿಕೆಯಾಗಿ ಇದೀಗ 40ಕ್ಕೆ ತಲುಪಿದೆ.
ರಾಜ್ಯದ ಪ್ರಮುಖ ಟೊಮೇಟೊ ಉತ್ಪಾದನಾ ಪ್ರದೇಶಗಳಾದ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಮಳೆಯ ಕೊರತೆ ಉಂಟಾಗಿರುವುದು ಪೂರೈಕೆಯ ಮೇಲೆ ಪರಿಣಾಮ ಬೀರಿದೆ. ಬೆಲೆ ಕುಸಿತದಿಂದಾಗಿ ಈ ಹಿಂದೆ ಟೊಮೇಟೊ ಬೆಳೆದಿದ್ದ ಹಲವು ರೈತರು ಗಿಡಗಳನ್ನು ಕಿತ್ತು ಹಾಕಿರುವುದರಿಂದ ಪ್ರಸ್ತುತ ಇಳುವರಿ ಕಡಿಮೆಯಾಗಿದೆ. ಇದರ ಪರಿಣಾಮ ಮಾರುಕಟ್ಟೆಗೆ ಟೊಮೇಟೊ ಪೂರೈಕೆ ಕುಸಿದಿದೆ.
ಇದರ ಜೊತೆಗೆ ಸಾಗಾಟ ವೆಚ್ಚ ಹೆಚ್ಚಳವೂ ದರ ಏರಿಕೆಗೆ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ. ದಿಢೀರ್ ಬೆಲೆ ಹೆಚ್ಚಳದಿಂದ ಗೃಹಿಣಿಯರ ದಿನನಿತ್ಯದ ಅಡುಗೆ ಖರ್ಚು ಮಾತ್ರವಲ್ಲದೆ ಹೊಟೇಲ್ ಹಾಗೂ ಆಹಾರ ಉದ್ಯಮದ ಮೇಲೂ ಹೆಚ್ಚುವರಿ ಹೊರೆ ಬೀಳುವ ಸಾಧ್ಯತೆ ಇದೆ.
ದಸರಾ ಹಬ್ಬದ ದಿನಗಳಲ್ಲಿ ಬೇಡಿಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಟೊಮೇಟೊ ದರ ಮತ್ತಷ್ಟು ಏರಿಕೆಯಾಗುವ ಆತಂಕವೂ ವ್ಯಕ್ತವಾಗಿದೆ. ತರಕಾರಿ ಮಾರುಕಟ್ಟೆಯಲ್ಲಿ ದರ ನಿಯಂತ್ರಣಕ್ಕೆ ಸಂಬಂಧಿಸಿದ ಇಲಾಖೆಗಳು ಸೂಕ್ತ ಕ್ರಮ ಕೈಗೊಂಡು, ಗ್ರಾಹಕರಿಗೆ ಹೊರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.