ಪುತ್ತೂರಿನಲ್ಲಿ ಭಾರೀ ಮಳೆ: ನ್ಯಾಯಾಲಯದ ಆವರಣ ಗೋಡೆ ಕುಸಿತ
Thursday, October 08, 2026
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನಲ್ಲಿ ಸುರಿದ ಭಾರೀ ಮಳೆ ಹಾಗೂ ಗಾಳಿಗೆ ವಿವಿಧೆಡೆ ಹಾನಿ ಸಂಭವಿಸಿದೆ. ಬನ್ನೂರಿನ ಆನೆಮಜಲು ಸಮೀಪ ನಿರ್ಮಾಣ ಹಂತದಲ್ಲಿರುವ ನೂತನ ನ್ಯಾಯಾಲಯ ಸಂಕೀರ್ಣದ ಆವರಣ ಗೋಡೆ ಕುಸಿದು ಸ್ಥಳೀಯ ರಸ್ತೆಗೆ ಬಿದ್ದಿದೆ.
ಮಳೆಯ ಸಂದರ್ಭದಲ್ಲಿ ಆವರಣ ಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಬಳಿಕ ಏಕಾಏಕಿ ಗೋಡೆ ಕುಸಿದು ಬಿದ್ದಿದೆ. ನ್ಯಾಯಾಲಯದ ಆವರಣ ಗೋಡೆ ಪಕ್ಕದ ಅಂಗನವಾಡಿ ಕೇಂದ್ರದವರೆಗೂ ವಿಸ್ತರಿಸಿ ನಿರ್ಮಿಸಲಾಗಿತ್ತು. ರಸ್ತೆಗೆ ಬಿದ್ದ ಕಲ್ಲು ಹಾಗೂ ಇತರ ಅವಶೇಷಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಇದೇ ವೇಳೆ ಭಾರೀ ಗಾಳಿಗೆ ಬನ್ನೂರಿನ ಜೈನರಗುರಿ ಸಮೀಪ ಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದು, ಕಂಬವೂ ಧರೆಗುರುಳಿದೆ. ಘಟನೆಯಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ವಿದ್ಯುತ್ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ತೆರಳಿ ಅಗತ್ಯ ಕ್ರಮ ಕೈಗೊಂಡರು.