ರಿಕ್ಷಾದಲ್ಲಿ ಬಿಟ್ಟುಹೋದ 10 ಲಕ್ಷ ಮೌಲ್ಯದ ಚಿನ್ನಾಭರಣ ಮರಳಿಸಿದ ಚಾಲಕ
Monday, October 19, 2026
ಪ್ರಯಾಣಿಕ ದಂಪತಿ ಆಟೋ ರಿಕ್ಷಾದಲ್ಲಿ ಬಿಟ್ಟುಹೋದ ಅಂದಾಜು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ಗಂಗೊಳ್ಳಿ ಪೊಲೀಸ್ ಠಾಣೆಗೆ ಒಪ್ಪಿಸಿ ವಾರಸುದಾರರಿಗೆ ಮರಳಿಸುವ ಮೂಲಕ ಆಟೋ ಚಾಲಕ ಫಝಲು ರೆಹಮಾನ್ ಪ್ರಾಮಾಣಿಕತೆ ಮೆರೆದಿದ್ದಾರೆ.
ಅ.17ರಂದು ಕೇಶವ ತೋಳಾರ್ ಅವರು ಪತ್ನಿಯೊಂದಿಗೆ ಫಝಲು ರೆಹಮಾನ್ ಅವರ ಆಟೋ ರಿಕ್ಷಾದಲ್ಲಿ ಪ್ರಯಾಣಿಸಿದ್ದು, ಈ ವೇಳೆ ಅಂದಾಜು 10 ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗ್ ಅನ್ನು ರಿಕ್ಷಾದಲ್ಲೇ ಮರೆತು ಹೋಗಿದ್ದರು.
ಬ್ಯಾಗ್ ಗಮನಿಸಿದ ಚಾಲಕ ಫಝಲು ರೆಹಮಾನ್ ಅದನ್ನು ಸುರಕ್ಷಿತವಾಗಿ ಗಂಗೊಳ್ಳಿ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಬಳಿಕ ಬ್ಯಾಗ್‌ನ ವಾರಸುದಾರರಾದ ಕೇಶವ ತೋಳಾರ್ ಅವರು ಠಾಣೆಗೆ ಆಗಮಿಸಿ, ಬ್ಯಾಗ್‌ನಲ್ಲಿದ್ದ ಚಿನ್ನಾಭರಣಗಳು, ಮೊಬೈಲ್ ಫೋನ್ ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ ಪಡೆದುಕೊಂಡರು.
ಆಟೋ ಚಾಲಕ ಫಝಲು ರೆಹಮಾನ್ ಅವರ ಪ್ರಾಮಾಣಿಕ ನಡೆಗೆ ಗಂಗೊಳ್ಳಿ ಠಾಣಾಧಿಕಾರಿ ಪವನ್ ನಾಯಕ್ ಅಭಿನಂದನೆ ಸಲ್ಲಿಸಿದ್ದಾರೆ.