ಕೆರೆಗೆ ಕಾರು ಬಿದ್ದು ದುರಂತ: ದಂಪತಿ, ನಾಲ್ಕು ವರ್ಷದ ಮಗು ಸಾವು
Wednesday, October 21, 2026
ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕೆರೆಗೆ ಬಿದ್ದು ದಂಪತಿ ಹಾಗೂ ಅವರ ನಾಲ್ಕು ವರ್ಷದ ಮಗು ಮೃತಪಟ್ಟ ದಾರುಣ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಬಾಣಂಗಾಲದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಮೃತರನ್ನು ಸಿದ್ದಾಪುರ ಹೈಸ್ಕೂಲ್ ಪೈಸರಿ ನಿವಾಸಿಗಳಾದ ವಿಜೇಶ್ (36), ಅವರ ಪತ್ನಿ ಪಮಿತ (34) ಹಾಗೂ ನಾಲ್ಕು ವರ್ಷದ ಪುತ್ರಿ ಲಿಯಾ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ಸಿದ್ದಾಪುರದಿಂದ ಬಾಣಂಗಾಲ ಗ್ರಾಮಕ್ಕೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿ ಬಿದ್ದಿದೆ ಎನ್ನಲಾಗಿದೆ.
ಬುಧವಾರ ತೋಟದ ಕಾರ್ಮಿಕರು ಕೆರೆಯಲ್ಲಿ ಕಾರು ಮುಳುಗಿರುವುದನ್ನು ಗಮನಿಸಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಕಾರನ್ನು ಪತ್ತೆಹಚ್ಚಿ ಪರಿಶೀಲಿಸಿದಾಗ ಅದರೊಳಗೆ ದಂಪತಿ ಹಾಗೂ ಮಗುವಿನ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂದಿನ ಕ್ರಮ ಕೈಗೊಂಡಿದ್ದಾರೆ.