ದಸರಾ ರಜೆ ಎಫೆಕ್ಟ್: ಮಲ್ಪೆ ಬೀಚ್ನಲ್ಲಿ ಜನಜಂಗುಳಿ: ರಸ್ತೆಯುದ್ದಕ್ಕೂ ಟ್ರಾಫಿಕ್ ಕಿರಿಕಿರಿ
ದಸರಾ ರಜೆಯ ಹಿನ್ನೆಲೆಯಲ್ಲಿ ಕರಾವಳಿಯ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಪೆ ಬೀಚ್ಗೆ ಪ್ರವಾಸಿಗರ ದಂಡೇ ಹರಿದುಬರುತ್ತಿದೆ. ರಜೆಯ ಸಂಭ್ರಮವನ್ನು ಸವಿಯಲು ಕುಟುಂಬ ಸಮೇತವಾಗಿ, ಸ್ನೇಹಿತರ ಬಳಗದೊಂದಿಗೆ ಆಗಮಿಸುತ್ತಿರುವ ಪ್ರವಾಸಿಗರಿಂದ ಬೀಚ್ ಕಳೆಗಟ್ಟಿದೆ.
ಉಡುಪಿ ಶ್ರೀಕೃಷ್ಣ ಮಠದ ದರ್ಶನದ ಜೊತೆಗೆ ಕರಾವಳಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಿರುವ ಪ್ರವಾಸಿಗರು ಮಲ್ಪೆ ಕಡಲತೀರದತ್ತ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡುತ್ತಿದ್ದಾರೆ. ವಿಶಾಲವಾದ ಮರಳಿನ ತೀರ, ಅಲೆಗಳ ಅಬ್ಬರ, ತಂಪಾದ ಸಮುದ್ರದ ಗಾಳಿ ಪ್ರವಾಸಿಗರನ್ನು ಆಕರ್ಷಿಸುತ್ತಿದ್ದು, ಮಕ್ಕಳು ಮರಳಿನಲ್ಲಿ ಆಟವಾಡುತ್ತಾ, ಯುವಜನರು ಅಲೆಗಳ ನಡುವೆ ಸಂಭ್ರಮಿಸುತ್ತಾ ರಜೆಯ ಖುಷಿಯನ್ನು ಅನುಭವಿಸುತ್ತಿದ್ದಾರೆ.
ಕಡಲತೀರದಲ್ಲಿ ಕುಟುಂಬಗಳ ಕಲರವ, ಸ್ನೇಹಿತರ ಸಂಭ್ರಮ ಹಾಗೂ ಪ್ರವಾಸಿಗರ ಓಡಾಟದಿಂದ ಮಲ್ಪೆ ಬೀಚ್ ಪ್ರವಾಸಿ ಚಟುವಟಿಕೆಗಳ ಕೇಂದ್ರವಾಗಿ ಮಾರ್ಪಟ್ಟಿದೆ. ಹಲವರು ಸಮುದ್ರ ತೀರದಲ್ಲಿ ಫೋಟೋ, ಸೆಲ್ಫಿ ತೆಗೆದುಕೊಳ್ಳುವ ಮೂಲಕ ರಜೆಯ ಕ್ಷಣಗಳನ್ನು ಸ್ಮರಣೀಯವಾಗಿಸಿಕೊಳ್ಳುತ್ತಿದ್ದಾರೆ.
ದಸರಾ ರಜೆಯ ಜೊತೆಗೆ ಸಾಲು ಸಾಲು ರಜೆಗಳು ಇರುವುದರಿಂದ ಉಡುಪಿ ಜಿಲ್ಲೆಗೆ ಪ್ರವಾಸಿಗರ ಆಗಮನ ಹೆಚ್ಚಾಗಿದೆ. ಮಲ್ಪೆ ಬೀಚ್ ಮಾತ್ರವಲ್ಲದೆ, ಸೈಂಟ್ ಮೇರೀಸ್ ದ್ವೀಪ ಸೇರಿದಂತೆ ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳತ್ತಲೂ ಪ್ರವಾಸಿಗರು ಮುಖ ಮಾಡುತ್ತಿದ್ದಾರೆ.
ಮಲ್ಪೆ ಬೀಚ್ಗೆ ಪ್ರವಾಸಿಗರ ಆಗಮನ ಹೆಚ್ಚಾದ ಬೆನ್ನಲ್ಲೇ ಬೀಚ್ಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಏರಿಕೆಯಾಗಿ ಟ್ರಾಫಿಕ್ ಜಾಂ ಉಂಟಾಗಿದೆ. ಕಾರು, ಬೈಕ್ ಸೇರಿದಂತೆ ವಿವಿಧ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದರಿಂದ ಕೆಲವೆಡೆ ವಾಹನಗಳ ಸಾಲು ಕಂಡುಬಂದಿದೆ. ಇದರಿಂದ ಬೀಚ್ಗೆ ತೆರಳುವ ಹಾಗೂ ಅಲ್ಲಿಂದ ವಾಪಸಾಗುವ ಪ್ರಯಾಣಿಕರು ಸಂಚಾರ ದಟ್ಟಣೆಯ ಸಮಸ್ಯೆ ಎದುರಿಸುವಂತಾಗಿದೆ.
ಒಟ್ಟಿನಲ್ಲಿ,ಮಲ್ಪೆ ಬೀಚ್ ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದರೆ, ಇತ್ತ ಸಂಪರ್ಕ ರಸ್ತೆಯಲ್ಲಿನ ವಾಹನ ದಟ್ಟಣೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಕೊಂಚ ಕಿರಿಕಿರಿ ಉಂಟುಮಾಡಿದೆ.
.jpeg)