-->
ಅ.23ರಂದು ಉಡುಪಿಯಲ್ಲಿ ‘ಊರೂರು ಜಂತರ್ ಮಂತರ್’ ಪ್ರತಿಭಟನಾ ಮೆರವಣಿಗೆ

ಅ.23ರಂದು ಉಡುಪಿಯಲ್ಲಿ ‘ಊರೂರು ಜಂತರ್ ಮಂತರ್’ ಪ್ರತಿಭಟನಾ ಮೆರವಣಿಗೆ


ಅಕ್ರಮವೆಂದು ಆರೋಪಿಸಲಾದ SIR ಪ್ರಕ್ರಿಯೆ ರದ್ದುಪಡಿಸುವುದು, ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸಿ ಕಾನೂನು ಕ್ರಮ ಜರುಗಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಕ್ಟೋಬರ್ 23ರಂದು ದೇಶವ್ಯಾಪಿ ಪ್ರತಿಭಟನೆ ನಡೆಯಲಿದೆ. ಇದರ ಅಂಗವಾಗಿ ಸಹಬಾಳ್ವೆ ಉಡುಪಿ ಹಾಗೂ ಸಹಭಾಗಿ ಸಂಘಟನೆಗಳ ಆಶ್ರಯದಲ್ಲಿ ಉಡುಪಿಯಲ್ಲಿ ಕಾಲ್ನಡಿಗೆ ಜಾಥಾ ಮತ್ತು ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದು ಸಹಬಾಳ್ವೆ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಫಣಿರಾಜ್ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, SIR ಪ್ರಕ್ರಿಯೆಯು ಸಂವಿಧಾನ ವಿರೋಧಿಯಾಗಿದ್ದು, ಸುಮಾರು 13 ಕೋಟಿ ಮತದಾರರ ಮತದಾನದ ಹಕ್ಕಿಗೆ ಧಕ್ಕೆಯಾಗಿದೆ ಎಂದು ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

2023ರಲ್ಲಿ ಜಾರಿಗೆ ತಂದಿರುವ ಚುನಾವಣಾ ಆಯುಕ್ತರ ನೇಮಕಾತಿ ನಿಯಮಗಳು ಸಂವಿಧಾನದ ಆಶಯಗಳಿಗೆ ಮಾರಕವಾಗಿವೆ ಎಂದು ಆರೋಪಿಸಿದ ಅವರು, ಈ ನಿಯಮಗಳನ್ನು ರದ್ದುಪಡಿಸಿ ನಿಷ್ಪಕ್ಷಪಾತ ಚುನಾವಣಾ ಆಯುಕ್ತರ ನೇಮಕಕ್ಕೆ ಪೂರಕವಾದ ಹೊಸ ನಿಯಮಗಳನ್ನು ರೂಪಿಸಬೇಕು ಎಂದು ಆಗ್ರಹಿಸಿದರು.

ಪ್ರಜಾಪ್ರಭುತ್ವದ ಮಾರ್ಗದಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನು ದಮನಿಸುವ ಉದ್ದೇಶದಿಂದ ದೆಹಲಿಯ ಜಂತರ್ ಮಂತರ್ ಪ್ರದೇಶದಲ್ಲಿ ಸಭೆಗಳಿಗೆ ನಿರ್ಬಂಧ ವಿಧಿಸಿರುವ ಕೇಂದ್ರ ಸರಕಾರದ ಕ್ರಮವನ್ನು ವಿರೋಧಿಸಿ, ‘ಪ್ರತಿ ಊರು ಜಂತರ್ ಮಂತರ್’ ಎಂಬ ಘೋಷವಾಕ್ಯದಡಿ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಅಕ್ಟೋಬರ್ 23ರಂದು ಮಧ್ಯಾಹ್ನ 3.30ಕ್ಕೆ ಉಡುಪಿಯ ಕ್ಲಾಕ್ ಟವರ್ ಬಳಿಯ ಗಾಂಧಿ ಪ್ರತಿಮೆಗೆ ಗೌರವಾರ್ಪಣೆ ಸಲ್ಲಿಸುವ ಮೂಲಕ ಕಾಲ್ನಡಿಗೆ ಜಾಥಾ ಆರಂಭವಾಗಲಿದೆ. ಬಳಿಕ ತ್ರಿವೇಣಿ ವೃತ್ತ, ಕೆ.ಎಂ. ಮಾರ್ಗ, ಹಳೆ ಡಯಾನ ವೃತ್ತ ಹಾಗೂ ಕೋರ್ಟ್ ರಸ್ತೆ ಮೂಲಕ ಸಾಗುವ ಜಾಥಾ ಜೋಡುಕಟ್ಟೆ ತಲುಪಲಿದ್ದು, ಅಲ್ಲಿ ಪ್ರತಿಭಟನಾ ಸಭೆ ನಡೆಯಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ತರ್, ಮುಸ್ಲಿಂ ಒಕ್ಕೂಟದ ಇಸ್ಮಾಯಿಲ್ ಹುಸೈನ್, ಅಮೃತ್ ಶೆಣೈ, ಲೂಯಿಸ್ ಡಿಸೋಜಾ, ಮಹಮ್ಮದ್ ಅಶ್ರಫ್, ಹುಸೈನ್ ಕೋಡಿಬೆಂಗ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article