-->
 ಮಂಗಳೂರಿನಲ್ಲಿ ವ್ಯಕ್ತಿಯ ಅಪಹರಣ: 1.15 ಕೋಟಿ ರೂ. ನಗದು ದರೋಡೆ

ಮಂಗಳೂರಿನಲ್ಲಿ ವ್ಯಕ್ತಿಯ ಅಪಹರಣ: 1.15 ಕೋಟಿ ರೂ. ನಗದು ದರೋಡೆ


ದಾವಣಗೆರೆಯಿಂದ ಮಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬರನ್ನು ಅಪಹರಿಸಿ, ಅವರ ಬಳಿ ಇದ್ದ 1.15 ಕೋಟಿ ರೂ. ನಗದು ಹೊಂದಿದ್ದ ಎರಡು ಬ್ಯಾಗ್ ಹಾಗೂ ಮೊಬೈಲ್ ಫೋನ್ ದರೋಡೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಪಹರಣಕ್ಕೊಳಗಾದವರನ್ನು ಸತ್ಯನಾರಾಯಣ ಎಂದು ಗುರುತಿಸಲಾಗಿದೆ. ಅವರು ಉರ್ವ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಪ್ರಕಾರ, ಅ.23ರಂದು ಅವರ ಮಾಲಕರಾದ ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿ ನಾಗರಾಜ್ ಅವರು 1.15 ಕೋಟಿ ರೂ. ನಗದು ಇದ್ದ ಎರಡು ಬ್ಯಾಗ್‌ಗಳನ್ನು ನೀಡಿ, ಮಂಗಳೂರಿಗೆ ತೆರಳಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಸಮೀಪದ ಲಾಡ್ಜ್‌ನಲ್ಲಿ ತಂಗುವಂತೆ ಸೂಚಿಸಿದ್ದರು. ತಾನು ಅಲ್ಲಿಗೆ ಬರುವುದಾಗಿ ತಿಳಿಸಿದ್ದರು.

ಅದರಂತೆ ಸತ್ಯನಾರಾಯಣ ಅವರು ಅ.27ರಂದು ರಾತ್ರಿ 10 ಗಂಟೆಗೆ ದಾವಣಗೆರೆಯಿಂದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣ ಬೆಳೆಸಿ, ಅ.28ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಮಂಗಳೂರು ತಲುಪಿದ್ದರು. ಲಾಲ್‌ಬಾಗ್ ಬಳಿ ಬಸ್‌ನಿಂದ ಇಳಿದು, ತಿಂಡಿ ತಿನ್ನಲು ಪಾದಚಾರಿ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಮುಖಕ್ಕೆ ಮಫ್ಲರ್ ಧರಿಸಿದ್ದ ನಾಲ್ವರು ಅಪರಿಚಿತರು ಕಪ್ಪು ಬಣ್ಣದ ಕಾರಿನಲ್ಲಿ ಬಂದು ಅವರನ್ನು ಬಲವಂತವಾಗಿ ಕಾರಿನೊಳಗೆ ಹಾಕಿ ಅಪಹರಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಬಳಿಕ ಮಂಗಳೂರು ನಗರದ ವಿವಿಧೆಡೆ ಸುಮಾರು ಎರಡು ಗಂಟೆಗಳ ಕಾಲ ಕಾರಿನಲ್ಲಿ ಸುತ್ತಾಡಿಸಿ, ಅವರ ಬಳಿಯಿದ್ದ 1.15 ಕೋಟಿ ರೂ. ನಗದು ತುಂಬಿದ್ದ ಎರಡು ಬ್ಯಾಗ್‌ಗಳು ಹಾಗೂ ಮೊಬೈಲ್ ಫೋನ್ ಕಸಿದುಕೊಂಡಿದ್ದಾರೆ. ನಂತರ ಬೆಳಗ್ಗೆ 8 ಗಂಟೆ ಸುಮಾರಿಗೆ ಕಾವೂರು ಬಸ್ ನಿಲ್ದಾಣದ ಸಮೀಪದ ಗುಡ್ಡವೊಂದರಲ್ಲಿ ಅವರನ್ನು ಕಾರಿನಿಂದ ಕೆಳಗಿಳಿಸಿ, ಪೊಲೀಸರಿಗೆ ದೂರು ನೀಡಿದರೆ ಜೀವ ಸಹಿತ ಬಿಡುವುದಿಲ್ಲ, ಕೊಂದು ಹಾಕುವುದಾಗಿ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಈ ಸಂಬಂಧ ಸತ್ಯನಾರಾಯಣ ಅವರು ಉರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Ads on article

Advertise in articles 1

advertising articles 2

Advertise under the article