-->
 ಅ.21: ಉಡುಪಿಯ ಗೀತಾಮಂದಿರದಲ್ಲಿ ಮಧ್ವ ಜಯಂತಿ ಉತ್ಸವ

ಅ.21: ಉಡುಪಿಯ ಗೀತಾಮಂದಿರದಲ್ಲಿ ಮಧ್ವ ಜಯಂತಿ ಉತ್ಸವ


ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಅವರ ಶಿಷ್ಯರಾದ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರ ಆಶೀರ್ವಾದದೊಂದಿಗೆ ಆಚಾರ್ಯ ಮಧ್ವರ ತತ್ವಾದರ್ಶಗಳನ್ನು ಸ್ಮರಿಸುವ ಹಾಗೂ ಅವರ ದ್ವೈತ ಸಿದ್ಧಾಂತದ ಮಹತ್ವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಮಧ್ವ ಜಯಂತಿ ಉತ್ಸವವನ್ನು ಧಾರ್ಮಿಕ ಪ್ರವಚನ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ  ಅಕ್ಟೋಬರ್ 21ರಂದು  ಉಡುಪಿಯ ಶ್ರೀಕೃಷ್ಣ ಮಠದ ಗೀತಾ ಮಂದಿರದ ಬಳಿಯ ಪುತ್ತಿಗೆ ಶ್ರೀ ನೃಸಿಂಹ ಆಡಿಟೋರಿಯಂನಲ್ಲಿ ಆಚರಿಸಲಾಗುವುದು ಎಂದು ಅಬುದಾಬಿಯ ಉದ್ಯಮಿ ಮುರಳಿ ಕೆ. ತಂತ್ರಿ ತಿಳಿಸಿದ್ದಾರೆ.

ಅವರು ಉಡುಪಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. 

ಅಂದು ಸಂಜೆ 4 ಗಂಟೆಯಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಮಧ್ವಾಚಾರ್ಯರ ಸಿದ್ಧಾಂತ ಹಾಗೂ ತತ್ವಾದರ್ಶಗಳನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ವಿಶೇಷ ವಿಚಾರಗೋಷ್ಠಿ, ಧಾರ್ಮಿಕ ಪ್ರವಚನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಧುನಿಕ ಜೀವನದಲ್ಲಿ ಮಧ್ವ ಸಿದ್ಧಾಂತದ ಪ್ರಸ್ತುತತೆ ಹಾಗೂ ಜೀವ ಸ್ವಭಾವದ ಮಹತ್ವದ ಕುರಿತು ವಿಚಾರಗೋಷ್ಠಿ ನಡೆಯಲಿದೆ. ವೇದಾಂತ, ವೈದಿಕ ಜೀವನ ಮತ್ತು ಮನಸ್ಸಿನ ಸ್ವರೂಪದ ಕುರಿತು ವಿಷಯ ತಜ್ಞರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಮಧ್ವಾಚಾರ್ಯರ ತತ್ವಚಿಂತನೆಗಳ ಕುರಿತು ಅರ್ಥಪೂರ್ಣ ಚರ್ಚೆ ನಡೆಯಲಿದೆ. 

ಸಂಜೆ 4 ಗಂಟೆಗೆ ವಿದುಷಿ ಡಾ. ಉಷಾ ಹೆಬ್ಬಾರ್ ಮತ್ತು ಬಳಗದವರಿಂದ ಭಜನಾ ಕಾರ್ಯಕ್ರಮದೊಂದಿಗೆ ಉತ್ಸವಕ್ಕೆ ಚಾಲನೆ ದೊರೆಯಲಿದೆ. ಭಕ್ತಿಗೀತೆಗಳ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಾಣವಾಗಲಿದೆ.

ಸಂಜೆ 4.45ರಿಂದ 6.15ರವರೆಗೆ ‘ಆಧುನಿಕ ಜೀವನದಲ್ಲಿ ಮಧ್ವ ಸಿದ್ಧಾಂತದ ಪ್ರಸ್ತುತತೆ’ ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಆಚಾರ್ಯ ಮಧ್ವರ ತತ್ವಗಳಲ್ಲಿ ಪ್ರಮುಖವಾದ ‘ಜೀವಸ್ವಭಾವ’ದ ಕುರಿತು ಸಂಪನ್ಮೂಲ ವ್ಯಕ್ತಿಗಳು ವಿಚಾರ ಮಂಡಿಸಲಿದ್ದಾರೆ.

ಖ್ಯಾತ ಕಲಾವಿದ  ಹಾಗೂ ಚಿಂತಕ, ಟಿಸಿಎಸ್‌ನ ನಿರ್ದೇಶಕ ಶೇಷಗಿರಿ ಕೆ.ಎಂ. ಮತ್ತು ಮನಃಶಾಸ್ತ್ರ ತಜ್ಞ ಡಾ. ಸುದರ್ಶನ್ ಸೇರಿದಂತೆ ವಿದ್ವಾಂಸರು ವಿಚಾರಗೋಷ್ಠಿಯಲ್ಲಿ ಭಾಗವಹಿಸಲಿದ್ದಾರೆ. ವಿದ್ವಾನ್ ಹರ್ಗ ಶ್ರೀ ರವೀಂದ್ರ ಭಟ್ ಅವರೂ ವಿಚಾರ ಮಂಡಿಸಲಿದ್ದಾರೆ. ಮಧ್ವಾಚಾರ್ಯರ ತತ್ವಗಳು ಆಧುನಿಕ ಜೀವನಕ್ಕೆ ಹೇಗೆ ಪ್ರಸ್ತುತವಾಗಿವೆ ಎಂಬುದರ ಕುರಿತು ಚರ್ಚೆ ನಡೆಯಲಿದೆ. ಪಲಿಮಾರು ಮಠದ ಶಾಲೆ ಜ್ಞಾನದರ್ಶಿನಿ, ತೀರ್ಥಹಳ್ಳಿ ಇದರ ಕಾರ್ಯದರ್ಶಿ ಲಕ್ಷ್ಮೀಶ ಭಟ್ ಮುದರಂಗಡಿ ಅವರು ವಿಚಾರಗೋಷ್ಠಿಯನ್ನು ನಿರ್ವಹಿಸಲಿದ್ದಾರೆ.

ಸಂಜೆ 6.15ರಿಂದ ರಾತ್ರಿ 8.30ರವರೆಗೆ ‘ಗಾನಲಹರಿ’ ಸಂಗೀತ ಕಾರ್ಯಕ್ರಮ ನಡೆಯಲಿದೆ. ವಿದ್ವಾನ್ ಕೃಷ್ಣರಾಜ ಭಟ್ ಕುತ್ಪಾಡಿ ಅವರ ವಾಚನ ಹಾಗೂ ಶ್ರೀಮತಿ ದಿವ್ಯಾ ಗಿರಿಧರ್ ಮತ್ತು ಬಳಗದವರ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಲಿದೆ.

ಕಾರ್ಯಕ್ರಮದ ಕೊನೆಯಲ್ಲಿ ವಿಶೇಷ ನಾಮಸಂಕೀರ್ತನೆ ನಡೆಯಲಿದ್ದು, ಮಧ್ವ ನಾಮಾವಳಿ ಹಾಗೂ ಅರ್ಚನೆಯೂ ನೆರವೇರಲಿದೆ. ಭಜನೆ, ವಿಚಾರಗೋಷ್ಠಿ, ಸಂಗೀತ ಮತ್ತು ನಾಮಸಂಕೀರ್ತನೆಯ ಮೂಲಕ ಮಧ್ವ ಜಯಂತಿ ಉತ್ಸವವು ಭಕ್ತಿಭಾವದಿಂದ ಸಂಪನ್ನಗೊಳ್ಳಲಿದೆ ಎಂದರು. ಸುದ್ದಿಗೋಷ್ಟಿಯಲ್ಲಿ ಪುತ್ತಿಗೆ ಮಠದ ವಿದ್ವಾಂಸ ವಿದ್ವಾನ್​ ಕೆ.ವಿ. ರಮಣ್​ ಆಚಾರ್ಯ ಉಪಸ್ಥಿತರಿದ್ದರು. 


Ads on article

Advertise in articles 1

advertising articles 2

Advertise under the article